ಜಿಲ್ಲೆ

ಜೆಡಿಎಸ್ ಅಧಿಕಾರಕ್ಕೆ ತರಲು ಶ್ರಮಿಸಿ: ಕಾರ್ಯಕರ್ತರಿಗೆ ಎಂಎಲ್ ಸಿ ಮಂಜೇಗೌಡ ಸಲಹೆ

ಮೈಸೂರು: ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಕಾಂಗ್ರೆಸ್‌ನ ವೈಫಲ್ಯಗಳನ್ನು ಜನರಿಗೆ ತಿಳಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಕಾರ್ಯಕರ್ತರಿಗೆ ಸಲಹೆ ನೀಡಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿ ಅವರು ಮಾತನಾಡಿದರು.
ಬಿಜೆಪಿ, ಕಾಂಗ್ರೆಸ್ ರಾಜಕೀಯ ನೋಡಿರುವ ನನಗೆ ಜೆಡಿಎಸ್‌ನಲ್ಲಿ ಇರುವಷ್ಟು ನಿಸ್ವಾರ್ಥ, ನಿಷ್ಠಾವಂತ ಕಾರ್ಯಕರ್ತರು ಬೇರೆ ಕಡೆ ಕಂಡಿಲ್ಲ. ಮುಂದಿನ ಚುನಾವಣೆ ಗಮನದಲ್ಲಿ ಇರಿಸಿಕೊಂಡು ನಾವು ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸಬೇಕು. ಜನರು ರಾಷ್ಟ್ರೀಯ ಪಕ್ಷಗಳಿಂದ ದೂರ ಹೋಗುತ್ತಿದ್ದು ಪ್ರಾದೇಶಿಕ ಪಕ್ಷಕ್ಕೆ ಹೆಚ್ಚು ಬೆಂಬಲ ನೀಡುತ್ತಿದ್ದಾರೆ. ಆದ್ದರಿಂದ 2023ಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಹೇಳಿದರು.
ಈಗ ನೇಮಕಗೊಂಡಿರುವ ಪದಾಧಿಕಾರಿಗಳು ಆಡಳಿತ ಪಕ್ಷದ ದುರಾಡಳಿತ, ಕುಮಾರಸ್ವಾಮಿ ಅವರ ಅಧಿಕಾರ ಅವಧಿಯಲ್ಲಿ ಮಾಡಿರುವ ಜನಪರ ಕೆಲಸಗಳನ್ನು ಜನರಿಗೆ ತಿಳಿಸಬೇಕು. ಪ್ರತಿಯೊಬ್ಬ ಕಾರ್ಯಕರ್ತ ಶಿಸ್ತಿನಿಂದ ಇರಬೇಕು. ನಗರದ ಮೂರು ಕ್ಷೇತ್ರಗಳಲ್ಲಿಯೂ ಗೆಲ್ಲುವ ಅವಕಾಶವಿದ್ದು, ಚಲುವೇಗೌಡರ ಅಧ್ಯಕ್ಷತೆಯಲ್ಲಿ ಸಂಘಟನೆ ಮಾಡಬೇಕು. ಅ. 18 ರಂದು ಕುಮಾರಸ್ವಾಮಿ ಪಕ್ಷದ ಸಂಘಟನೆ, ಚುನಾವಣೆ ವಿಚಾರದ ಬಗ್ಗೆ ಚರ್ಚಿಸಲು ನಗರಕ್ಕೆ ಬರುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕು ಎಂದು ಕೋರಿದರು.
ನಗರ ಜೆಡಿಎಸ್ ಅಧ್ಯಕ್ಷ ಕೆ.ಟಿ. ಚಲುವೇಗೌಡ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿಗಳಾದ ಆರ್. ಲಿಂಗಪ್ಪ, ಅಬ್ದುಲ್ಲಾ, ಶಾಹಿದ್, ನಗರಪಾಲಿಕೆ ಮಾಜಿ ಸದಸ್ಯರಾದ ಕೆಂಪಣ್ಣ, ವಸಂತಕುಮಾರಿ, ಬಾಲು, ಜಯರಾಮು, ಮುಖಂಡರಾದ ಪ್ರಕಾಶ ಪ್ರಿಯದರ್ಶನ್, ಗಂಗಾಧರ ಗೌಡ, ಅಮ್ಮ ಸಂತೋಷ್, ಮಂಜುನಾಥ್ ಬಾಬು, ರಮೇಶ್, ಕೃಷ್ಣ, ಎನ್.ಜಿ. ನಾಗರಾಜ್, ಕುಮಾರ್, ಮಹೇಶ್ ಇತರರು ಇದ್ದರು.