ಕೊಪ್ಪ ತಾಪಂನಲ್ಲಿ ಶಾಸಕ ಟಿ.ಡಿ.ರಾಜೇಗೌಡ ನೇತೃತ್ವದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ತಹಸೀಲ್ದಾರ್ ಲಿಖಿತಾ ಮೋಹನ್, ಸುಜಾತಾ, ಎಚ್.ಡಿ.ನವೀನ್‌ಕುಮಾರ್ ಇತರರಿದ್ದರು. 
ಜಿಲ್ಲೆ

ಜೆಜೆಎಂ ಭ್ರಷ್ಟಾಚಾರ ಲೋಕಾಯುಕ್ತ ತನಿಖೆಗೆ ನಿರ್ಧಾರ

ಎಸ್.ಎನ್.ರವೀಂದ್ರ

ಕೊಪ್ಪ: ಅವೈಜ್ಞಾನಿಕವಾಗಿ ಜಲ ಜೀವನ್ ಮಿಷನ್ ಕಾಮಗಾರಿಗಳನ್ನು ನಡೆಸಲಾಗಿದೆ. ನೀರಿಲ್ಲದ ಸ್ಥಳದಲ್ಲಿ ಟ್ಯಾಂಕ್, ಪೈಪ್ ಲೈನ್‌ಗಳನ್ನು ಮಾಡಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ ಹಾಗೂ ಭ್ರಷ್ಟಾಚಾರ ಎಸಗಿದ್ದಾರೆ. ಆದ್ದರಿಂದ ಜೆಜೆಎಂ ಕಾಮಗಾರಿಗಳನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಲು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಿರ್ಣಯಿಸಲಾಯಿತು.

ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಲೋಪದಿಂದ ಮನೆ ಮನೆಗೆ ನೀರು ನೀಡಲು ಸಾಧ್ಯವಾಗುತ್ತಿಲ್ಲ. ರಸ್ತೆ ಬದಿ ಗುಂಡಿಗಳನ್ನು ನಿರ್ಮಿಸಿ ಭೂಕುಸಿತ ಉಂಟಾಗಲು ಕಾರಣರಾಗಿದ್ದಾರೆ. ಇವರ ವಿರುದ್ಧ ಲೋಕಾಯುಕ್ತ ತನಿಖೆ ನಡೆದಲ್ಲಿ ನಿಜ ಬಣ್ಣ ಹೊರ ಬರಲಿದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ ಮಾತನಾಡಿ, ನೀರಿನ ಮೂಲ ಇಲ್ಲದ ಭಾಗದಲ್ಲಿ ಜೆಜೆಎಂ ಪೈಪ್‌ಗಳನ್ನು ಹಾಕಿದ್ದಾರೆ. ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಅನುಮಾನ ಮೂಡುತ್ತಿದೆ. ಹೊಕ್ಕಳಿಕೆ ಎಂಬಲ್ಲಿ ರಸ್ತೆ ಪಕ್ಕ ಗುಂಡಿ ತೋಡಿ ಪೈಪ್ ಎಳೆದ ಪರಿಣಾಮ ಮಳೆಗಾಲದಲ್ಲಿ ಧರೆ ಕುಸಿದಿದೆ. ಎಚ್ಚರಿಕೆ ಹಾಗೂ ಯೋಜನೆ ಇಲ್ಲದೆ ಸರ್ಕಾರದ ಹಣ ಪೋಲು ಮಾಡುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ವೆಂಕಟೇಶ್ ಗುರುಮೂರ್ತಿ ಮಾತನಾಡಿ, ಸಮಸ್ಯೆಯಾದ ಭಾಗದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ ಎಂದು ಸಭೆಗೆ ತಿಳಿಸಿದರು.

ಟಿ.ಡಿ.ರಾಜೇಗೌಡ ಮಾತನಾಡಿ, ಲೋಕೋಪಯೋಗಿ ಇಲಾಖೆಗೆ 19 ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದೇನೆ. ತಾಲೂಕಿನಲ್ಲಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಶೀಘ್ರದಲ್ಲಿಯೇ ಮುಚ್ಚಲಾಗುತ್ತದೆ ಎಂದು ತಿಳಿಸಿದರು. ಎಸ್.ಎನ್.ರಾಮಸ್ವಾಮಿ ಮಾತನಾಡಿ, ಮಳೆ ಸಂಪೂರ್ಣ ಕ್ಷೀಣಿಸಿದ ನಂತರ ಕಾಮಗಾರಿ ಎಂದು ಹೇಳುತ್ತಿದ್ದೀರಾ. ಆದರೆ ಕೆಲಸವಾಗುತ್ತಿಲ್ಲ ಎಂದರು.

ಪಿಡಬ್ಲುೃಡಿ ಎಇಇ ಕುಮಾರ್ ಮಾತನಾಡಿ, ಗುಂಡಿ ಮುಚ್ಚುವ ಕಾರ್ಯ ಶೀಘ್ರದಲ್ಲಿಯೇ ಆರಂಭಿಸುತ್ತೇವೆ. ಡಿಸೆಂಬರ್ ಅಂತ್ಯದೊಳಗಾಗಿ ಸಂಪೂರ್ಣ ಕೆಲಸ ಮುಗಿಸುತ್ತೇವೆ ಎಂದರು.

ಜಿಲ್ಲಾ ಆಸ್ಪತ್ರೆ ಹೊರತುಪಡಿಸಿದರೆ ಕೊಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚು ಶಸ್ತ್ರಚಿಕಿತ್ಸೆ ನಡೆಯುತ್ತದೆ. ಆದರೆ ಇಲ್ಲಿ ಕಾಯಂ ಅರಿವಳಿಕೆ ತಜ್ಞರು ಇಲ್ಲ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್ ಸಭೆ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಟಿ.ಡಿ.ರಾಜೇಗೌಡ, ಸಾರ್ವಜನಿಕ ಆಸ್ಪತ್ರೆಗೆ ಅರಿವಳಿಕೆ ತಜ್ಞರ ನೇಮಕಕ್ಕೆ ಆರೋಗ್ಯ ಸಚಿವರೊಂದಿಗೆ ಮಾತನಾಡುವುದಾಗಿ ಹೇಳಿದರು. ಅಶೋಕ್ ಮಾತನಾಡಿ, ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರು ಇದ್ದರೂ ಸಾಮಾನ್ಯ ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯರು ಹೆರಿಗೆ ಆಪರೇಷನ್ ಮಾಡುತ್ತಾರೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಂದ್ರ ಕಿರೀಟಿ ಮಾತನಾಡಿ, ಹೆರಿಗೆ ಶಸ್ತ್ರ ಚಿಕಿತ್ಸೆ ಮಾಡಬಾರದು ಎಂದು ಎಲ್ಲೂ ಇಲ್ಲ. ಈ ಹಿಂದೆಯೂ ಹೆರಿಗೆ ಮಾಡಿಸುತ್ತಿದ್ದರು ಎಂದರು.

ಹಿರೇಕೊಡಿಗೆ ಗ್ರಾಪಂ ಬೊಮ್ಮಲಾಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಗ್ರಾಪಂ ಜಾಗ ಕಾಯ್ದಿರಿಸಿದೆ. ಕಟ್ಟಡ ಕಟ್ಟಲು ಅರಣ್ಯ ಇಲಾಖೆ ಅಡ್ಡಿಪಡಿಸಿದೆ. ಒಮ್ಮೆ ಪರಿಭಾವಿತ ಅರಣ್ಯವೆಂದು, ಇನ್ನೊಮ್ಮೆ ಡಿಸಿ ಮೀಸಲು ಅರಣ್ಯ ಎನ್ನುತಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ ತಿಳಿಸಿದರು. ಅರಣ್ಯ ಇಲಾಖೆ ಅಧಿಕಾರಿ ವಿಜಯಕುಮಾರ್ ಮಾತನಾಡಿ, ಆ ಜಾಗ ಡಿಸಿ ರೀಸರ್ವ್ ಇದೆ ಎಂದರು. ಆಗ ಶಾಸಕರು, ಡಿಸಿ ರೀಸರ್ವ್‌ಗೆ ಕಳುಹಿಸಿದವರು ಯಾರು ಎಂದು ಪ್ರಶ್ನಿಸಿದರು. ಇದಕ್ಕೆ ವಿಜಯಕುಮಾರ್, ಕಂದಾಯ ಇಲಾಖೆ ಎಂದು ಹೇಳಿದಾಗ ಸಭೆಯಲ್ಲಿದ್ದವರು ಆಶ್ಚರ್ಯಪಟ್ಟರು.

ಸಾರ್ವಜನಿಕ ಆಸ್ಪತ್ರೆ ಪಕ್ಕದ ಶೌಚಗೃಹ ನಿರ್ವಹಣೆ ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸಭೆಯ ಗಮನಕ್ಕೆ ಬಂದಾಗ, ಶಾಸಕರು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಚಂದ್ರಕಾಂತ್ ಅವರನ್ನು ಕುರಿತು, ಕಚೇರಿಯಲ್ಲಿ ಪಕ್ಷ ರಾಜಕಾರಣ ಕಡಿಮೆ ಮಾಡಿ, ಅಭಿವೃದ್ಧಿ ಕಡೆಗೆ ಗಮನ ಕೊಡಿ ಎಂದು ತಾಕೀತು ಮಾಡಿದರು. ತಾಲೂಕು ಕಚೇರಿ ಕಟ್ಟಡದ ಮಹಡಿ ಮೇಲೆ ಉಪ ನೋಂದಣಾಧಿಕಾರಿ ಕಚೇರಿ ಇದ್ದು, ಇದರಿಂದ ವೃದ್ಧರಿಗೆ, ಅಂಗವಿಕಲರಿಗೆ ಸಮಸ್ಯೆಯಾಗುತ್ತಿದೆ. ಉಪ ನೋಂದಣಾಧಿಕಾರಿ ಕಚೇರಿಯನ್ನು ಕೆಳಭಾಗದ ಕೊಠಡಿಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಲಾಯಿತು. ಜಂಟಿ ಸರ್ವೇ, ಅರಣ್ಯ ಇಲಾಖೆ ಕಾನೂನು ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

ತಹಸೀಲ್ದಾರ್ ಲಿಖಿತಾ ಮೋಹನ್, ತಾಪಂ ಆಡಳಿತಾಧಿಕಾರಿ ಸುಜಾತಾ, ಇಒ ಎಚ್.ಡಿ.ನವೀನ್‌ಕುಮಾರ್, ನಾಮನಿರ್ದೇಶಿತ ಸದಸ್ಯರಾದ ಬಿ.ಪಿ.ಚಿಂತನ್, ರಾಜಶಂಕರ್, ನಾಗೇಶ್ ಆಮೀನ್, ಸಾಕ್, ಪ್ರಿಯಾಂಕಾ, ಎಪಿಎಂಸಿ ಅಧ್ಯಕ್ಷ ಭಾಸ್ಕರ್ ನಾಯಕ್, ಲೋಕನಾಥಪುರ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎನ್.ಟಿ.ಗೋಪಾಲಕೃಷ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಜೆ.ನಾಗಭೂಷಣ್ ಇದ್ದರು.