ಆಳಂದ: ಜಲಜೀವನ್ ಮಿಷನ್ (ಜೆಜೆಎಂ) ಕಾಮಗಾರಿಗಳನ್ನು ತುರ್ತುಗತಿಯಲ್ಲಿ ಮುಗಿಸಿ, ಇಲಾಖೆಗೆ ಹಸ್ತಾಂತರಿಸಬೇಕು ಎಂದು ಎಇಇ ಸಂಗಮೇಶ ಬಿರಾದಾರ ತಾಕೀತು ಮಾಡಿದರು.
ಧಂಗಾಪುರ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಜೆಜೆಎಂ ಕಾಮಗಾರಿಯ ಪ್ರಗತಿ ಪರಿಶೀಲಿಸಿದ ಅವರು, ಈ ಹಿಂದೆ ಕಾಮಗಾರಿಗಳಿಗೆ ಸರ್ಕಾರ ತಡೆಹಿಡಿದಿತ್ತು. ಇದೀಗ ಅನುಮತಿ ನೀಡಿದೆ. ಧಂಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2021-22ನೇ ಸಾಲಿನಲ್ಲಿ 1.38 ಕೋಟಿ ರೂ. ಅನುದಾನದಲ್ಲಿ ಜೆಜೆಎಂ ಕಾಮಗಾರಿ ಆರಂಭಿಸಲಾಗಿದೆ. ಪೈಪ್‌ಲೈನ್ ಕೆಲಸ ಮಾತ್ರ ಮುಗಿದಿದ್ದು, ನಳ ಜೋಡಣೆ, ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗಳು ಬಾಕಿ ಇವೆ. ಗುತ್ತಿಗೆದಾರರು ಮುತುವರ್ಜಿ ವಹಿಸಿ ಶೀಘ್ರದಲ್ಲಿ ಕೆಲಸ ಮುಗಿಸಬೇಕು. ಪೈಪ್‌ಲೈನ್ ಸಲುವಾಗಿ ಸಿಸಿ ರಸ್ತೆಗಳು ಹಾಳಾಗಿದ್ದು, ಕೂಡಲೇ ದುರಸ್ತಿ ಮಾಡಬೇಕು ಎಂದು ಸೂಚನೆ ನೀಡಿದರು.
ಗ್ರಾಮದ ಮುಖಂಡ ಯಲ್ಲಾಲಿಂಗ ಪೂಜಾರಿ ಮಾತನಾಡಿ, ಜೆಜೆಎಂ ಕಾಮಗಾರಿ ಹೆಸರಿನಲ್ಲಿ ಹಳ್ಳಿಯಲ್ಲಿನ ರಸ್ತೆಗಳು ಹಾಳಾಗಿವೆ. ನೀರು ಸರಬರಾಜು ಮಾಡಲು ಬಾವಿ ತೋಡಿಲ್ಲ, ನೀರಿನ ಟ್ಯಾಂಕ್ ನಿರ್ಮಾಣ ಮಾಡಿದ್ದು, ಇದು ಸಹ ಕಳಪೆಯಾಗಿದೆ. ಹೀಗಾದಲ್ಲಿ ಜನರಿಗೆ ಶುದ್ಧ ನೀರು ಯಾವಾಗ ಸರಬರಾಜು ಮಾಡ್ತಿರಾ ಎಂದು ಕಿಡಿಕಾರಿದರು.
ಪ್ರಮುಖರಾದ ರಾಘವೇಂದ್ರ ಕಟ್ಟಿಮನಿ, ಚಂದ್ರಕಾAತ, ಕೃಷ್ಣ ಕಾಂಬಳೆ, ಅಮೃತ ಮೇಲಕೇರಿ, ಪ್ರಕಾಶ ಕಾಂಬಳೆ, ವಿನೋದ ಪಟ್ಟೇದಾರ, ವಿಘ್ನೇಶ ತೇಲ್ಕರ್ ಇತರರಿದ್ದರು.