ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳ ಮೂರುಸಾವಿರಮಠ ವೈದ್ಯಕೀಯ ಕಾಲೇಜ್ (ಜೆಜಿಎಂಎಂಸಿ) ಮುಂದಿನ ವರ್ಷದಿಂದ ಸ್ವಂತ ಕಟ್ಟಡದಲ್ಲಿ ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿದೆ ಎಂದು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮತ್ತು ಬಿವಿಬಿ ಇಂಜಿನಿಯರಿಂಗ್ ಕಾಲೇಜ್ನ 75ನೇ ವರ್ಷದ ಅಮೃತ ಮಹೋತ್ಸವ ನಿಮಿತ್ತ ಬೆಳಗಾವಿಯ ಕೆಎಲ್ಇ ವಿಶ್ವವಿದ್ಯಾಲಯ, ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯ, ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜ್, ಜಗದ್ಗುರು ಗಂಗಾಧರ ಮಹಾಸ್ವಾಮಿಗಳ ಮೂರುಸಾವಿರಮಠ ವೈದ್ಯಕೀಯ ಕಾಲೇಜ್ ವತಿಯಿಂದ ನಗರದ ಕೆಎಲ್ಇ ಕೋ-ಆಪರೇಟಿವ್ ಆಸ್ಪತ್ರೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದ ಜನರ ಸೇವೆಗೆ ಕೆಎಲ್ಇ ಸಂಸ್ಥೆ ಬದ್ಧವಾಗಿದೆ. ಆರೋಗ್ಯ, ಶಿಕ್ಷಣ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ಗ್ರಾಮೀಣ ಭಾಗದಲ್ಲೂ ಈ ಸೇವೆ ಮುಂದುವರಿಯಲಿದೆ ಎಂದರು.
ಮಹಾಪೌರ ಈರೇಶ ಅಂಚಟಗೇರಿ ಮಾತನಾಡಿ, ಸದೃಢ ಭಾರತ ನಿರ್ವಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಕಲ್ಪ ಮಾಡಿದ್ದಾರೆ. ಹಾಗಾಗಿ, ವಿವಿಧ ಯೋಜನೆಗಳನ್ನು ಕೇಂದ್ರದಿಂದ ಜಾರಿಗೆ ತರಲಾಗುತ್ತಿದೆ. ರಾಜ್ಯ ಸರ್ಕಾರವೂ ಇದಕ್ಕೆ ಕೈ ಜೋಡಿಸಿದೆ. ಅವಳಿನಗರದ ಜನರು ಆರೋಗ್ಯವಂತರಾಗಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಕೆಎಲ್ಇ ಸಂಸ್ಥೆಯ ಹಿರಿಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೆಜಿಎಂಎಂಸಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ. ಹಾಗಾಗಿ, ಈ ವರ್ಷ 150 ವಿದ್ಯಾರ್ಥಿಗಳು ಅಡ್ಮಿಷನ್ ಮಾಡಿಸಿದ್ದಾರೆ. ಈ ಕ್ಯಾಂಪಸ್ ನೋಡಿ ವಿದ್ಯಾರ್ಥಿಗಳು ಮತ್ತು ಪಾಲಕರು ಖುಷಿಪಡುತ್ತಿದ್ದಾರೆ. ಸೀಟ್ ರ್ಯಾಂಕ್ನಲ್ಲಿ ಜೆಜೆಎಂಎಂಸಿ ರಾಜ್ಯದಲ್ಲಿ 2ನೇ ಸ್ಥಾನ ಪಡೆದಿದೆ ಎಂದು ಖುಷಿ ಹಂಚಿಕೊಂಡರು.
ದೇಹ ದಾನದ ವಾಗ್ದಾನ ಮಾಡಿದ ಹೆಸ್ಕಾಂನ ಓಂಕಾರಗೌಡ ಅವರನ್ನು ಸನ್ಮಾನಿಸಲಾಯಿತು. ಅಂಗಾಂಗದಾನಕ್ಕೆ ಹೆಸರು ನೋಂದಾಯಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಶಿಬಿರದಲ್ಲಿ ಪಾಲ್ಗೊಂಡಡಿದ್ದ 2300ಕ್ಕೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ತಪಾಸಣೆ ಜತೆಗೆ ಔಷಧ ನೀಡಲಾಯಿತು.
ಪ್ರಾಚಾರ್ಯ ಡಾ.ಎಂ.ಜಿ. ಹಿರೇಮಠ, ಉದ್ಯಮಿ ವಿಜಯಕುಮಾರ ಶೆಟ್ಟರ್, ಪ್ರಮುಖರಾದ ಲಿಂಗರಾಜ ಪಾಟೀಲ, ವಿ.ಡಿ. ಪಾಟೀಲ, ಡಾ. ವೈ.ಎಫ್. ಹಂಜಿ, ಡಾ. ಅಲ್ಲಮಪ್ರಭು, ಎಫ್.ಎಚ್. ಜಕ್ಕಪ್ಪನವರ ಇತರರು ಇದ್ದರು.