ಜಿಲ್ಲೆ

ಜೆಒಸಿ ನೌಕರರ ಸೇವೆ ಕಾಯಂ ಮಾಡಿ

ಕಲಬುರಗಿ ವೃತ್ತಿ ಶಿಕ್ಷಣ(ಜೆಒಸಿ)ದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೂರಾರು ನೌಕರರನ್ನು ವಿದ್ಯಾರ್ಹತೆ ಆಧರಿಸಿ ಸೇವೆ ಕಾಯಂಗೊಳಿಸಬೇಕು ಎಂದು ಜೆಒಸಿ ನೌಕರರು ಆಗ್ರಹಿಸಿದ್ದಾರೆ.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್, ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿನ ವೃತ್ತಿ ಶಿಕ್ಷಣ ವಿಭಾಗ ಸ್ಥಗಿತಗೊಳಿಸಲಾಗಿದೆ. ಇದರಲ್ಲಿ ಕೆಲಸ ಮಾಡುತ್ತಿದ್ದ ೩,೭೪೬ ಸಿಬ್ಬಂದಿ ಪೈಕಿ ೩,೨೧೬ ಜನರನ್ನು ಕಾಯಂಗೊಳಿಸಿ ವಿವಿಧ ಇಲಾಖೆಗಳಲ್ಲಿ ವಿಲೀನ ಮಾಡಲಾಗಿದೆ. ಬಾಕಿ ಉಳಿದ ೫೩೦ ಸಿಬ್ಬಂದಿ ಕೈಬಿಡುವ ಮೂಲಕ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.

ವೃತ್ತಿ ಶಿಕ್ಷಣದ ೩೭೪೬ ನೌಕರರಿಗೂ ವಿಲೀನ ಮಾಡಿಕೊಳ್ಳಲು ನಿರ್ಧರಿಸಲಾಗಿತ್ತು. ನಂತರ ಶಾಸನಬದ್ಧ ಕಾನೂನು ರಚನೆ ಅಗತ್ಯ ಎಂದು ವೃತ್ತಿ ಶಿಕ್ಷಣ ವಿಧೇಯಕ ೨೦೧೧ರಚಿಸಲಾಯಿತು. ಈ ಮೂಲಕ ೫ ವರ್ಷಗಳಿಗಿಂತ ಕಡಿಮೆ ಸೇವೆ ಹೊಂದಿದ ನೌಕರರನ್ನು ಕೈಬಿಡಲಾಗಿದೆ. ಅವರಲ್ಲಿಯೂ ಕೆಲವರು ಮೃತಪಟ್ಟಿದ್ದಾರೆ. ವಯಸ್ಸು ಮೀರಿದೆ. ಈಗ ಸುಮಾರು ೩೦೦ ಜನ ಮಾತ್ರ ಅರ್ಹರಿದ್ದಾರೆ. ಇನ್ನು ಕಾಯಂ ಆದ ೩,೨೧೬ ನೌಕರರ ಪೈಕಿ ೨,೯೩೧ ಮಂದಿ ಮಾತ್ರ ಸೇವೆಗೆ ಸೇರಿದ್ದಾರೆ. ಉಳಿದ ೨೮೫ ಹುದ್ದೆ ಖಾಲಿ ಇವೆ. ಈ ಖಾಲಿ ಹುದ್ದೆಗಾದರೂ ನಮ್ಮನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಮಮತಾ, ಅನಿತಾ ಸಿ., ಗೌರಿ ದೇಸಾಯಿ, ಲೀಲಾವತಿ, ಸುಧಾಕರ್, ಮೊಹ್ಮದ್ ಅಲಿ, ಅಬ್ದುಲ್ ರೆಹಮಾನ್, ರಂಜಿತ್, ನಾಗರಾಜ, ಎನ್.ಎ.ಬಿರಾದಾರ್, ಮಧುಸೂದನ್ ಬಡಿಗೇರ, ಕಪಿಲ್, ಮೃತ್ಯುಂಜಯ, ಆನಂದಕುಮಾರ್ ಇತರರು ಇದ್ದರು.