ಜಿಲ್ಲೆ

ಜೆಎಸ್‌ಎಸ್‌ನ ಪುನಃಶ್ಚೇತನಕ್ಕೆ ಪೇಜಾವರ ಶ್ರೀ ಪ್ರೇರಣೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ಉಡುಪಿಯ ಪೇಜಾವರಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಜನತಾ ಶಿಕ್ಷಣ ಸಮಿತಿಯ ಮೊದಲ ಅಧ್ಯಕ್ಷರಾಗಿದ್ದರು. ಸ್ವಾಮೀಜಿ, ಸಂತ ಮತ್ತು ದಾರ್ಶನಿಕರಾಗಿದ್ದ ಅವರು ಜೆಎಸ್‌ಎಸ್‌ನ ಪುನಃಶ್ಚೇತನಕ್ಕೆ ಪ್ರೇರಕಶಕ್ತಿ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದರು.
ನಗರದ ವಿದ್ಯಾಗಿರಿ ಜೆಎಸ್‌ಎಸ್ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ತೃತೀಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ತುಳಿತಕ್ಕೊಳಗಾದವರು, ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಶ್ರೀಗಳು ಅಪಾರ ಸೇವೆ ಸಲ್ಲಿಸಿದ್ದಾರೆ. ಭೂಕಂಪ, ಪ್ರವಾಹ ಮತ್ತು ಕ್ಷಾಮಗಳಂತಹ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಅವರ ದತ್ತಿ ಕಾರ್ಯಗಳು ಸಹಾನುಭೂತಿಯಿಂದ ಕೂಡಿದ್ದವು ಎಂದರು.
ಡಾ. ಸೂರಜ್ ಜೈನ್, ಮಹಾವೀರ ಉಪಾಧ್ಯೆ, ಸಾಧನಾ ಹಾಗೂ ಸಂಸ್ಥೆಯ ವಿವಿಧ ಸಂಸ್ಥೆಗಳ ಮುಖ್ಯಸ್ಥರು ಪೂಜ್ಯರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.