ಮೈಸೂರು: ಸುತ್ತೂರು ಡಾ. ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಪ್ರಸಾದ’ ಲೇಖನ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಗಿದೆ.
ಮೈಸೂರಿನ ಊಟಿ ರಸ್ತೆಯ ಜೆಎಸ್‌ಎಸ್ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜಿನ ಆರ್. ಕುಸುಮಬಾಯಿ (ಪ್ರಥಮ), ಹುಣಸೂರು ತಾಲೂಕು ಹನಗೋಡು ಸರ್ಕಾರಿ ಪದವಿಪೂರ್ವ ಕಾಲೇಜಿನ ಎ.ಎಂ. ಚೈತ್ರ (ದ್ವಿತೀಯ), ಸಕಲೇಶಪುರ ಅನೆಮಹಲ್ ರಸ್ತೆಯ ಅಚೀವರ್ಸ್ ಪ್ರಜ್ಞಾ ಪಿಯು ಕಾಲೇಜಿನ ಟಿ.ಜಿ. ಲಕ್ಷ್ಮೀ (ತೃತೀಯ), ಕೊಳ್ಳೇಗಾಲದ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಎಸ್.ಭವಾನಿ (ನಾಲ್ಕನೇ) ಬಹುಮಾನ ಪಡೆದಿದ್ದಾರೆ.
ಅಲ್ಲದೇ ಗುಂಡ್ಲುಪೇಟೆ ಶ್ರೀಮತಿ ಕೆ.ಎಸ್. ನಾಗರತ್ನಮ್ಮ ಪದವಿಪೂರ್ವ ಕಾಲೇಜಿನ ಲೋಕೇಶ್, ಮೈಸೂರು ಹೆಬ್ಬಾಳಿನ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಕೆ.ಸಿ. ಭೂಮಿಕಾ ಪ್ರೋತ್ಸಾಹ ಬಹುಮಾನ ಪಡೆದಿದ್ದಾರೆ.
ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಕೊಡಗು ಜಿಲ್ಲೆಗಳ ಪದವಿಪೂರ್ವ, ಪದವಿ, ಸ್ನಾತಕೋತ್ತರ ಕೇಂದ್ರಗಳು, ಪಾಲಿಟೆಕ್ನಿಕ್ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ವನ್ಯ ಜೀವಿಗಳು ಮತ್ತು ಮಾನವ ಸಂಘರ್ಷ ಎಂಬ ವಿಷಯ ಕುರಿತು ಲೇಖನ ಸ್ಪರ್ಧೆ ಏರ್ಪಡಿಸಲಾಗಿತ್ತು. 60 ಕಾಲೇಜುಗಳಿಂದ ಒಟ್ಟು 259 ಲೇಖನಗಳು ಬಂದಿದ್ದವು.
ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಆ.29ರಂದು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಲಿರುವ ಡಾ. ಶ್ರೀಶಿವರಾತ್ರಿ ರಾಜೇಂದ್ರ ಸಾಮೀಜಿ 108ನೇ ಜಯಂತಿ ಮಹೋತ್ಸವದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಜೆಎಸ್‌ಎಸ್ ಪ್ರಕಟಣಾ ವಿಭಾಗ ಹೇಳಿಕೆಯಲ್ಲಿ ತಿಳಿಸಿದೆ.