ಜಿಲ್ಲೆ

ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಗಾಂಧಿ ಶಿಲ್ಪ ಬಜಾರ್ ಮೇಳ

ಮೈಸೂರು: ನಗರದ ಹೆಬ್ಬಾಳದಲ್ಲಿರುವ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಆಯೋಜಿಸಿರುವ ಗಾಂಧಿ ಶಿಲ್ಪ ಬಜಾರ್ ಮೇಳಕ್ಕೆ ಚಾಲನೆ ನೀಡಲಾಯಿತು.

ಜವಳಿ ಸಚಿವಾಲಯ ಪ್ರಾಯೋಜಕತ್ವದಲ್ಲಿ ಆಯೋಜಿಸಿರುವ ಮೇಳವನ್ನು ಶಾಸಕ ಟಿ.ಎಸ್.ಶ್ರೀವತ್ಸ ಉದ್ಘಾಟಿಸಿದರು. ಜವಳಿ ಮಂತ್ರಾಲಯದ ಚೆನ್ನೈ ಕಚೇರಿಯ ಉಪನಿರ್ದೇಶಕ ಕೆ.ಧನರಾಜನ್, ಅರ್ಬನ್ ಹಾತ್ ಯೋಜನಾಧಿಕಾರಿ ಎಂ.ಶಿವನಂಜಸ್ವಾಮಿ ಇತರರು ಇದ್ದರು.

ಮೇಳದಲ್ಲಿ 150 ಮಳಿಗೆ ತೆರೆಯಲಾಗಿದೆ. ದೇಶದ ಅಂದಾಜು 25 ರಾಜ್ಯಗಳ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯ ಇದೆ.

ಮೇಳಕ್ಕೆ ಸೆ.21ರವರೆಗೆ ಬೆಳಗ್ಗೆ 10.30ರಿಂದ ರಾತ್ರಿ 9ರ ವರೆಗೆ ಉಚಿತ ಪ್ರವೇಶ ಇದೆ.

ಕುಶಲಕರ್ಮಿಗಳು ತಮ್ಮ ಕುಶಲಕಲೆಗಳನ್ನು ಗ್ರಾಹಕರ ಅಗತ್ಯ ಮತ್ತು ಅಭಿರುಚಿಯನ್ನು ತಿಳಿದುಕೊಂಡು ಮಾರುಕಟ್ಟೆಗೆ ಬೇಕಾದ ನವೀನ ವಿನ್ಯಾಸದ ವಸ್ತುಗಳನ್ನು ರೂಪಿಸಿದ್ದಾರೆ.

ಮರದ ಕೆತ್ತನೆ, ಶಿಲಾ ಶಿಲ್ಪ, ಕಂಚಿನ ವಿಗ್ರಹಗಳು, ಮರದ ಕುಂದಣ ಕಲೆ, ಮಣ್ಣಿನ ಮಡಕೆಗಳು, ಪೇಪರ್, ರತ್ನಗಂಬಳಿ, ಹತ್ತಿ ಜಮಖಾನ, ಇಮಿಟೇಶನ್ ಆಭರಣಗಳು, ಮರದ ಅರಗಿನ ಕಲಾವಸ್ತುಗಳು, ಬಾಟಿಕ್, ಕಲಾಂಕಾರಿ ಚಿತ್ರಕಲೆ, ಚರ್ಮದ ಆಕರ್ಷಕ ವಸ್ತುಗಳು, ಕಲಾತ್ಮಕ ಚರ್ಮದ ಪಾದರಕ್ಷೆಗಳು, ಚನ್ನಪಟ್ಟಣದ ಗೊಂಬೆಗಳು, ಕಸೂತಿ ಕಲೆ,

ತಾಂಜಾವೂರ್ ಚಿತ್ರಕಲೆಗಳು, ಮರದ ಕೆತ್ತನೆಗಳು, ಮಧ್ಯಪ್ರದೇಶದ ಮಹೇಶ್ವರಿ, ಚಂದೇರಿ ಸೀರೆಗಳು, ಬಿಹಾರದ ಮಧುಬನಿ ಚಿತ್ರಕಲೆ, ಒಡಿಶಾದ ಪಟ್ಟ ಚಿತ್ರ, ಬೆಳ್ಳಿಯ ಸೂಕ್ಷ್ಮ ವಿನ್ಯಾಸ ವಸ್ತುಗಳು, ಅಸ್ಸಾಂನ ಬಿದಿರು-ಬೆತ್ತದ ವಸ್ತುಗಳು, ಡ್ರೈ ಪ್ಲವರ್‌ಗಳು, ಉತ್ತರಪ್ರದೇಶದ ಎಂಬ್ರಾಯ್ಡರಿ, ಕಲಾತ್ಮಕ ಕಲ್ಲಿನ ವಸ್ತುಗಳು, ಪಂಜಾಬ್‌ನ ಫುಲ್ಕಾರಿ ಬಟ್ಟೆಗಳು, ಪಶ್ಚಿಮ ಬಂಗಾಳದ ಕಾಂತಾ ಸೀರೆಗಳು ಖರೀದಿಗೆ ಸಿಗಲಿವೆ.

ಮಧ್ಯವರ್ತಿಗಳು ಇಲ್ಲದೆ ಗ್ರಾಹಕರು ಮತ್ತು ಉತ್ಪಾದಕರ ಮಧ್ಯೆ ನೇರ ಸಂಪರ್ಕ ಮತ್ತು ಸಂವಹನಕ್ಕೆ ಅವಕಾಶ ಕಲ್ಪಿಸುವ ಈ ಮೇಳ ಗ್ರಾಹಕ ಮತ್ತು ಕುಶಲಕರ್ಮಿಗಳ ಬಾಂಧವ್ಯ ವೃದ್ಧಿಗೂ ಅನುಕೂಲ ಒದಗಿಸಲಾಗಿದೆ.

ಆಕರ್ಷಣೆಯಾಗಿ ರಾಜ್ಯದ ಭೌಗೋಳಿಕ ಗುರುತು ಪಡೆದ ಕರಕುಶಲ ವಸ್ತುಗಳೆಂದರೆ ಬಿದ್ರಿವೇರ್(ಬೀದರ್), ಕಸೂತಿ ಕಲೆ(ಧಾರವಾಡ), ಮೈಸೂರು ರೋಸ್‌ವುಡ್ ಇನ್‌ಲೇ(ಮೈಸೂರು), ಚನ್ನಪಟ್ಟಣದ ಆಟಿಕೆಗಳು, ಕಿನ್ನಾಳದ ಆಟಿಕೆಗಳು, ಲಂಬಾಣಿ ಕಸೂತಿ(ಸಂಡೂರು), ಗಂಜೀಫಾ ಕಲೆ(ಮೈಸೂರು), ನವಲಗುಂದ ಧರಿ(ಗದಗ-ನವಲಗುಂದ), ಮೈಸೂರು ಪೇಂಟಿಂಗ್‌ಗಳು ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.

ಮೇಳದ ಎಲ್ಲ 10 ದಿನಗಳಲ್ಲಿ ಜೆಎಸ್‌ಎಸ್ ಆಸ್ಪತ್ರೆ ವತಿಯಿಂದ ಕರಕುಶಲಕರ್ಮಿಗಳಿಗೆ, ಕೈಮಗ್ಗ ನೇಕಾರರಿಗೆ ಮತ್ತು ಮೇಳಕ್ಕೆ ಭೇಟಿ ನೀಡುವ ಗ್ರಾಹಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.