ಮೈಸೂರು: ನಗರದ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನಲ್ಲಿ ಮಾ.5ರವರೆಗೆ ಹಮ್ಮಿಕೊಂಡಿರುವ ಗುಜರಾತ್ ಕರಕುಶಲ ಉತ್ಸವಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಉದ್ಘಾಟಿಸಿದರು. ಈ ಬಾರಿಯ ಮೇಳದಲ್ಲಿ ಗುಜರಾತ್ ರಾಜ್ಯದ ವಿವಿಧ ಭಾಗಗಳ ಪ್ರಸಿದ್ಧ ಹಾಗೂ ಕ್ರೀಯಾಶೀಲರಾಗಿರುವ ಸುಮಾರು 60ಕ್ಕೂ ಹೆಚ್ಚು ಕುಶಲಕರ್ಮಿಗಳು ಭಾಗವಹಿಸಿವೆ. ಕುಶಲಕರ್ಮಿಗಳು ತಯಾರಿಸಿದ ಪಟೋಲ ಸೀರೆಗಳು, ಬಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್‌ಶೀಟ್‌ಗಳು, ಟವಲ್‌ಗಳು, ಕುಶನ್ ಕವರ್‌ಗಳು, ಪರಿಸರ ಸ್ನೇಹಿ ಆಭರಣಗಳು, ಡ್ರೆಸ್ ಮೆಟೀರಿಯಲ್ಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಡ್‌ವರ್ಕ್, ಮೆಟಲ್ ವರ್ಕ್, ಕುರ್ತಿಗಳು, ಚನಿಯಾ ಜೋಲಿ, ಬಾಂದಿನಿ ಹಾಗೂ ಇನ್ನಿತರ ಆಕರ್ಷಣೀಯ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳು ಕೈಗೆಟುಕುವ ದರದಲ್ಲಿ ಮಾರಾಟಕ್ಕೆ ಲಭ್ಯವಿದೆ.
ತಯಾರಕರಿಂದಲೇ ನೇರವಾಗಿ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಒದಗಿಸುವ ಪ್ರಯತ್ನವನ್ನು ಗುಜರಾತ್ ಸರ್ಕಾರ ಮಾಡುತ್ತಿದೆ. ಈ ಕಾರಣದಿಂದಾಗಿ ಮೈಸೂರು ಹಾಗು ಸುತ್ತಮುತ್ತಲಿನ ಗ್ರಾಹಕರಿಗೆ ಗುಜರಾತ್ ಸಂಸ್ಕೃತಿಯ ಉಡುಗೆ- ತೊಡುಗೆಗಳು ಮತ್ತು ಅಲಂಕಾರಿಕ ವಸ್ತುಗಳು ನೇರವಾಗಿ ಉತ್ತಮ ಗುಣಮಟ್ಟದಲ್ಲಿ ಕಡಿಮೆ ಬೆಲೆಗೆ ದೊರೆಯಲಿದೆ. ಮೇಳಕ್ಕೆ ಬೆ.10 ರಿಂದ ರಾ.8ರ ಅವಧಿಯಲ್ಲಿ ಭೇಟಿ ನೀಡಬಹುದು.
ಈ ಸಂದರ್ಭ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್. ಶಿವಕುಮಾರಸ್ವಾಮಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ಹಣಕಾಸು ವಿಭಾಗದ ನಿರ್ದೇಶಕ ಪುಟ್ಟಸುಬ್ಬಪ್ಪ, ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಬಿ. ಸುರೇಶ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಅಭಿವೃದ್ಧಿ ವಿಭಾಗದ ಪ್ರಭಾರ ನಿರ್ದೇಶಕ ಕೆ.ಎಲ್. ರೇವಣ್ಣ ಸ್ವಾಮಿರವರು, ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎಚ್.ಆರ್. ಮಹದೇವಸ್ವಾಮಿ ಹಾಗೂ ಇತರರು ಇದ್ದರು.