ಜಿಲ್ಲೆ

ಜೆಎಸ್‌ಎಸ್ ಅಕಾಡೆಮಿಗೆ 21ನೇ ಶ್ರೇಯಾಂಕ

 ಮೈಸೂರು: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ 2025ನೇ ಸಾಲಿನ ರಾಷ್ಟ್ರೀಯ ಸಾಂಸ್ಥಿಕ ರ‌್ಯಾಂಕಿಂಗ್ ಚೌಕಟ್ಟಿನ (ಎನ್‌ಐಆರ್‌ಎಫ್) ವಾರ್ಷಿಕ ರ‌್ಯಾಂಕಿಂಗ್ ಪಟ್ಟಿಯನ್ನು ಗುರುವಾರ ಬಿಡುಗಡೆಗೊಂಡಿದೆ.

ನವದೆಹಲಿಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, 2025ನೇ ಸಾಲಿನ ಎನ್‌ಐಆರ್‌ಎಫ್ ಶ್ರೇಯಾಂಕವನ್ನು ಬಿಡುಗಡೆ ಮಾಡಿದ್ದಾರೆ. 17 ವಿವಿಧ ವರ್ಗಗಳಲ್ಲಿನ ಮಾಪನಕ್ಕಾಗಿ ದೇಶದ 14,163 ಉನ್ನತ ಶಿಕ್ಷಣ ಸಂಸ್ಥೆಗಳು ಭಾಗವಹಿಸಿದ್ದವು.

ಕಳೆದೆರಡು ವರ್ಷಗಳಿಂದ ದೇಶದ ಅಗ್ರ 25ರಲ್ಲಿ ಸ್ಥಾನ

ದೇಶದ ವಿಶ್ವವಿದ್ಯಾಲಯಗಳ ವಿಭಾಗ ಪಟ್ಟಿಯಲ್ಲಿ ಮೈಸೂರಿನ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು 21ನೇ ರ‌್ಯಾಂಕ್ ಪಡೆದುಕೊಂಡಿದೆ.

2016ರಿಂದ ಎನ್‌ಐಆರ್‌ಎಫ್‌ನಲ್ಲಿ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು ಉತ್ತಮ ಶ್ರೇಯಾಂಕ ಗಳಿಸುತ್ತಿದ್ದು, ಕಳೆದೆರಡು ವರ್ಷಗಳಿಂದ ದೇಶದ ಅಗ್ರ 25ರಲ್ಲಿ ಸ್ಥಾನ ಗಳಿಸಿದೆ.

ವಿಶ್ವವಿದ್ಯಾಲಯಗಳ ಪೈಕಿ ಇದು ಕಳೆದ ಬಾರಿಯ ಶ್ರೇಣಿಗಿಂತಲೂ ಮೂರು ಶ್ರೇಯಾಂಕ ವೃದ್ಧಿಸಿಕೊಂಡು, 21ನೇ ಶ್ರೇಯಾಂಕ ಗಳಿಸಿದೆ.

ವಿವಿಯ ಘಟಕ ಕಾಲೇಜುಗಳು ಸಹ ಇದೇ ರೀತಿ ತಮ್ಮ ಗುಣಮಟ್ಟ ವೃದ್ಧಿಸಿಕೊಂಡಿದ್ದು, ಊಟಿಯ ಜೆಎಸ್‌ಎಸ್ ಫಾರ್ಮಸಿ ಕಾಲೇಜು ದೇಶದ ಫಾರ್ಮಸಿ ಕಾಲೇಜುಗಳ ಪೈಕಿ ಟಾಪ್ 10ರೊಳಗಿದ್ದು, 4ನೇ ಸ್ಥಾನವನ್ನು ಉಳಿಸಿಕೊಂಡಿದೆ.

ಮೈಸೂರು ಜೆಎಸ್‌ಎಸ್ ಫಾರ್ಮಸಿ ಕಾಲೇಜು 7ನೇ ಸ್ಥಾನ ಗಳಿಸಿದೆ.

ಅದೇ ರೀತಿ ಜೆಎಸ್‌ಎಸ್ ದಂತ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯ ಕಳೆದ ಸಾಲಿಗಿಂತಲೂ ಎರಡು ಶ್ರೇಯಾಂಕ ವೃದ್ಧಿಸಿಕೊಂಡು ಕ್ರಮವಾಗಿ ದೇಶದ 10ನೇ ಮತ್ತು 37ನೇ ಸ್ಥಾನಕ್ಕೇರಿದೆ.

ಈ ಶ್ರೇಯಾಂಕವು ವಿಶ್ವವಿದ್ಯಾಲಯ ಮತ್ತು ಅದರ ಘಟಕ ಕಾಲೇಜುಗಳು ಒದಗಿಸುವ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪ್ರತಿ ಬಿಂಬಿಸುತ್ತದೆ.

ಪ್ರಸ್ತುತ ಸಾಲಿನಲ್ಲಿ ನೂತನವಾಗಿ ಪ್ರಾರಂಭಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳ ವರ್ಗದ ಶ್ರೇಯಾಂಕದಲ್ಲಿ ಜೆಎಸ್‌ಎಸ್ 11-50ನೇ ರ‌್ಯಾಂಕ್ ಬ್ಯಾಂಡ್‌ನಲ್ಲಿದೆ. ಎನ್‌ಇಪಿ 2020 ಅನ್ನು ಅನುಷ್ಠಾನಕ್ಕೆ ತಂದ ಮೊದಲ ಕೆಲವು ವಿಶ್ವವಿದ್ಯಾಲಯಗಳಲ್ಲಿ ಜೆಎಸ್‌ಎಸ್ ಎಎಚ್‌ಇಆರ್ ಒಂದಾಗಿದೆ. ಈ ಸಂದರ್ಭದಲ್ಲಿ ಅಕಾಡೆಮಿಯು ಜೀವ ವಿಜ್ಞಾನ ವಿಭಾಗದಲ್ಲಿ ಆರು ಬಿ.ಎಸ್‌ಸಿ (ಆನರ್ಸ್) ಕೋರ್ಸ್ ಜಾರಿಗೆ ತಂದಿದೆ.

ಆರೋಗ್ಯ ಕ್ಷೇತ್ರವಲ್ಲದೆ, ಮ್ಯಾನೇಜ್‌ಮೆಂಟ್ ಶಿಕ್ಷಣ ಮತ್ತು ಜೀವ ವಿಜ್ಞಾನಗಳಂತಹ ವಿಷಯಗಳಲ್ಲಿ ಬೋಧನೆ, ಕಲಿಕೆ, ಸಂಶೋಧನೆ ಮತ್ತು ಆರೋಗ್ಯ ಕಾಳಜಿ ಅಭ್ಯಾಸಗಳಲ್ಲಿ ವಿಶ್ವದರ್ಜೆಯ ಗುಣಮಟ್ಟವನ್ನು ಹೊಂದಿದೆ.

ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ವರುಣ ಜಾಗತಿಕ ಕ್ಯಾಂಪಸ್‌ನಲ್ಲಿ ಹೊಸ ತರಹದ ಶೈಕ್ಷಣಿಕ ಕಾರ್ಯಕ್ರಮ ಜಾರಿಗೊಳಿಸುವ ಮೂಲಕ ವಿದ್ಯಾರ್ಥಿಗಳಿಗಾಗಿ ತನ್ನ ಕೊಡುಗೆಯನ್ನು ಮತ್ತಷ್ಟು ವೈವಿಧ್ಯಮಯವಾಗಿಸುವ ಗುರಿಯನ್ನು ಹೊಂದಿದೆ ಎಂದು ಜೆಎಸ್‌ಎಸ್ ಎಎಚ್‌ಇಆರ್ ಪ್ರಕಟಣೆ ತಿಳಿಸಿದೆ.