ಜಿಲ್ಲೆ

ಜೆ.ಪಿ.ನಗರ ನಿವಾಸಿಗಳ ಪ್ರತಿಭಟನೆ

ಬೇಲೂರು: ಪಟ್ಟಣದ ಜೆಪಿ ನಗರದ ಮೂಡಿಗೆರೆ ರಸ್ತೆಯಲ್ಲಿ ಖಾಸಗಿ ಕಲ್ಯಾಣ ಮಂಟಪಕ್ಕೆ ಒಳಚರಂಡಿ ಸಂಪರ್ಕ ಕಲ್ಪಿಸುವುದಕ್ಕಾಗಿ ಅವೈಜ್ಞಾನಿಕವಾಗಿ ಕೈಗೊಂಡ ಕಾಮಗಾರಿಯಿಂದ ಒಳಚರಂಡಿ ನೀರೆಲ್ಲ ರಸ್ತೆಯಲ್ಲಿ ಹರಿದು ದುರ್ನಾತ ಬೀರುತ್ತಿದ್ದು ಪುರಸಭೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿದರು.

ಸಾಮಾಜಿಕ ಹೋರಾಟಗಾರ ನೂರ್ ಅಹಮ್ಮದ್ ಮಾತನಾಡಿ, ಜೆಪಿ ನಗರದಲ್ಲಿ ಒಳಚರಂಡಿ ನಿರ್ಮಾಣವಾಗಿ 30 ವರ್ಷವಾದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇದರ ನಡುವೆಯೇ ಸಮೀಪದ ಖಾಸಗಿ ಕಲ್ಯಾಣ ಮಂಟಪಕ್ಕೆ ಒಳಚರಂಡಿ ಸಂಪರ್ಕ ಕಲ್ಪಿಸುವುದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಮೂಲಕ ಪೈಪ್‌ಲೈನ್ ಅಳವಡಿಸಿ ಕಲ್ಯಾಣ ಮಂಟಪಕ್ಕೆ ಅವೈಜ್ಞಾನಿಕವಾಗಿ ಸಂಪರ್ಕ ಕಲ್ಪಿಸಿದ್ದಾರೆ. ಇದರಿಂದ ಒಳಚರಂಡಿ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲಿ ಹರಿಯುತಿತ್ತು. ಈ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದ ಸಂದರ್ಭ 15 ದಿನಗಳ ಹಿಂದೆ ಸಿಬ್ಬಂದಿ ಪೈಪ್‌ಲೈನ್ ದುರಸ್ತಿಗೆ ಪ್ರಯತ್ನಿಸಿದರೂ ಆಗದಿದ್ದಾಗ ಒಳಚರಂಡಿ ನೀರು ನಿಲ್ಲಲ್ಲು ಮಣ್ಣು ತೆಗೆದು ಗುಂಡಿ ಮಾಡಿದ್ದರಿಂದ ಹೊಂಡದಲ್ಲಿ ಒಳ ಚರಂಡಿ ನೀರು ಗುಂಡಿಯಲ್ಲಿ ನಿಂತು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಗಬ್ಬು ವಾಸನೆ ಬರುತ್ತಿದೆ ಎಂದು ದೂರಿದರು.

ಇದರಿಂದ ಅಕ್ಕಪಕ್ಕದ ಮನೆಯವರು ಹಾಗೂ ರಸ್ತೆಯಲ್ಲಿ ಓಡಾಡುವವರು ಮೂಗು ಮುಚ್ಚಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಯಾವುದಾದರೂ ವಾಹನ ಕೊಳಚೆ ನೀರಿನ ಮೇಲೆ ಹಾದು ಹೋದರೆ ಒಳ ಚರಂಡಿ ನೀರೆಲ್ಲ ಮೈಮೇಲೆ ಬೀಳುತ್ತಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಆದ್ದರಿಂದ ಪುರಸಭೆ ಅಧಿಕಾರಿಗಳು, ಸದಸ್ಯರು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಸಿಬೇಕು ಎಂದು ಒತ್ತಾಯಿಸಿದರು.

ಸ್ಥಳೀಯ ನಿವಾಸಿ ಜಮೀಲಾ ಮಾತನಾಡಿ, ಒಳಚರಂಡಿ ನೀರಿನ ದುರ್ವಾಸನೆಯಿಂದ ನಾವು ಅಡುಗೆ ಮಾಡಿಕೊಂಡು ತಿನ್ನಲು ಆಗುತ್ತಿಲ್ಲ. ಅಕ್ಕಪಕ್ಕದ ಮನೆಗಳವರಿಗೆ ಆರೋಗ್ಯದಲ್ಲಿ ಸಮಸ್ಯೆಗಳಾಗುತ್ತಿವೆ. ನಾವು ಇನ್ನು ಎಷ್ಟು ದಿನ ಈ ದುರ್ವಾಸನೆ ಸಹಿಸಿ ಕೊಂಡಿರಬೇಕು ಎಂದು ಬೇಸರ ವ್ಯಕ್ತ ಪಡಿಸಿದರು.

ಸ್ಥಳೀಯ ನಿವಾಸಿಗಳಾದ ಮಜೀದ್ ಸಾಬ್, ಜೈಬೂನ್, ರಫೀಕ್, ಮುಬಾರಕ್ ಇದ್ದರು.