ಜಿಲ್ಲೆ

ಜೆ.ಪಿ. ನಗರ ಉದ್ಯಾನದಲ್ಲಿ ಗಿಡಗಂಟಿ

ಹುಬ್ಬಳ್ಳಿ: ಗೋಕುಲ ರಸ್ತೆ ಜೆ.ಪಿ. ನಗರದಲ್ಲಿನ ಉದ್ಯಾನದ ತುಂಬಾ ಗಿಡಗಂಟಿಗಳು ಬೆಳೆದಿದ್ದು, ನಿರ್ವಹಣೆ ಮರೆತ ಪಾಲಿಕೆ ಸ್ಥಳೀಯ ನಿವಾಸಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಸಾಕಷ್ಟು ವಿಶಾಲವಾಗಿರುವ ಉದ್ಯಾನ ವಾಯುವಿಹಾರಿಗಳಿಗೆ ಹಿತಕರವಾಗಿತ್ತು. ಸುತ್ತಮುತ್ತಲಿನ ನಿವಾಸಿಗಳಿಗೆ ಬೆಳಗ್ಗೆ ಮತ್ತು ಸಂಜೆ ವಾಕಿಂಗ್​ಗೆ ಪ್ರಶಸ್ತ ಸ್ಥಳವಾಗಿತ್ತು. ಆದರೆ, ಈಗ ವಾಯುವಿಹಾರಿಗಳು ಉದ್ಯಾನದಿಂದ ದೂರ ಉಳಿದು ಹಲವು ತಿಂಗಳುಗಳೇ ಕಳೆದಿವೆ. ಜತೆಗೆ ಕಳೆದ 3-4 ತಿಂಗಳುಗಳಿಂದ ಪಾಲಿಕೆ ಅಧಿಕಾರಿಗಳೂ ಇತ್ತ ಮುಖ ಹಾಕಿಲ್ಲ. ಹೀಗಾಗಿ ಗಿಡಗಂಟಿಗಳು ಸಂಪೂರ್ಣ ಉದ್ಯಾನವನ್ನು ಆವರಿಸಿಕೊಂಡಿದೆ. ಇದರಿಂದ ವಾಯುವಿಹಾರಿಗಳು ಉದ್ಯಾನದೊಳಗೆ ಪ್ರವೇಶಿಸುವುದಿರಲಿ, ಹತ್ತಿರವೂ ಸುಳಿಯುತ್ತಿಲ್ಲ. ಮೇಲಾಗಿ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಸುತ್ತಮುತ್ತಲಿನ ನಿವಾಸಿಗಳು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಉದ್ಯಾನದಲ್ಲಿ ವಾಕಿಂಗ್ ಪಾತ್ ಇದೆ. ಮಕ್ಕಳಿಗಾಗಿ ಜಾರುಬಂಡಿ, ಜೋಕಾಲಿ, ಇನ್ನಿತರ ಆಟೋಪಕರಣಗಳಿವೆ. ವಾಯುವಿಹಾರಿಗಳಿಗೆ ಕುಳಿತುಕೊಳ್ಳಲು 10-15 ಸಿಮೆಂಟ್ ಆಸನಗಳಿವೆ. ಸಾಂಸ್ಕೃತಿಕ-ಮನರಂಜನಾ ಕಾರ್ಯಕ್ರಮ ಆಯೋಜಿಸಲು ರಂಗಮಂದಿರವಿದೆ. ಉದ್ಯಾನದ ಸೂಕ್ತ ನಿರ್ವಹಣೆ ಇಲ್ಲದೆ ಇವೆಲ್ಲ ನಿಷ್ಪ್ರಯೋಜಕವಾಗಿವೆ. ಎಲ್ಲವೂ ಇದ್ದು ಇಲ್ಲದಂತಾಗಿದೆ. ಜಾರುಬಂಡಿ, ಜೋಕಾಲಿಯನ್ನು ಗಿಡಗಂಟಿಗಳು ಆವರಿಸಿಕೊಂಡಿವೆ. ಹೀಗೇ ಬಿಟ್ಟರೆ ಕೆಲವೇ ದಿನಗಳಲ್ಲಿ ವಾಕಿಂಗ್ ಪಾತ್ ಕೂಡ ಗಿಡಗಂಟಿಗಳಿಂದ ಮುಚ್ಚಿ ಹೋಗುವುದು ಖಚಿತ.

ಉದ್ಯಾನದಲ್ಲಿ ಕೆಲ ತಿಂಗಳುಗಳ ಹಿಂದೆಯಷ್ಟೇ ಜಾರುಬಂಡಿ, ಜೋಕಾಲಿ, ಸಿಮೆಂಟ್ ಆಸನಗಳನ್ನು ಅಳವಡಿಸಲಾಗಿದೆ. ಅವುಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಕೆಟ್ಟ ನಿರ್ವಹಣೆ ಹಾಗೂ ನಿರ್ಲಕ್ಷ್ಯ್ಕೆ ಉದ್ಯಾನ ಸಾಕ್ಷಿಯಾಗಿದೆ.

‘ಉದ್ಯಾನದಲ್ಲಿನ ಗಿಡಗಂಟಿಗಳನ್ನು ತೆಗೆದು ಸ್ವಚ್ಛ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಹೇಳಿದ್ದೇವೆ. ಕಂಟ್ರೋಲ್ ರೂಂಗೆ ದೂರು ಸಹ ನೀಡಿದ್ದೇವೆ. ಆದರೂ, ಪಾಲಿಕೆ ಅಧಿಕಾರಿಗಳು ಈವರೆಗೂ ಸ್ಪಂದಿಸಿಲ್ಲ. ಸುತ್ತಮುತ್ತಲಿನ ಪರಿಸರದಲ್ಲಿ ಸೊಳ್ಳೆ ಕಾಟ ವಿಪರೀತವಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ’ ಎಂದು ಸ್ಥಳೀಯರಾದ ಬಸವರಾಜ ಚವರ್ಗಿ, ಅರುಣ ಗಾಂವ್ಕರ್, ಗಿರೀಶ ಚವರ್ಗಿ ಹಾಗೂ ಜೆ.ಪಿ. ನಗರ ಯುವಕ ಮಂಡಳದ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಉದ್ಯಾನದ ಸ್ಥಿತಿಯ ಬಗ್ಗೆ ಪಾಲಿಕೆಯ ಉದ್ಯಾನ ವಿಭಾಗಕ್ಕೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಇನ್ನೊಮ್ಮೆ ಅವರ ಗಮನಕ್ಕೆ ತಂದು 2-3 ದಿನಗಳಲ್ಲಿ ಗಿಡಗಂಟಿಗಳನ್ನು ತೆಗೆಸಲಾಗುವುದು ಎಂದು ಪಾಲಿಕೆ ವಲಯ ಕಚೇರಿ (ನಂ. 7) ಸಹಾಯಕ ಆಯುಕ್ತ ಎಸ್.ಸಿ. ಬೇವೂರ ವಿಜಯವಾಣಿಗೆ ತಿಳಿಸಿದ್ದಾರೆ.