ಜಿಲ್ಲೆ

ಜೂನ್ 4ಕ್ಕೆ ಮತ ಎಣಿಕೆ, ಫಲಿತಾಂಶ ಪ್ರಕಟ


ಚಿತ್ರದುರ್ಗ:ಚಿತ್ರದುರ್ಗ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು. ಕೆಲವಡೆ ಮತದಾನ ಬಹಿಷ್ಕಾರದಂಥ ಘಟನೆಗಳು, ಹೃದಯಾಘಾತದಿಂದ ಮತಗಟ್ಟೆ ಅಧಿಕಾರಿಯೊಬ್ಬರು ನಿಧನ ಹೊಂದಿದ ದುರ್ಘಟನೆಯೂ ನಡೆಯಿತು.
ಕ್ಷೇತ್ರಾದ್ಯಂತ ಅಂದಾಜು ಶೇ.73.33 ಮತದಾನ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರವಾಯಿತು. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಕಲ್ಪಿತ ಮತದಾನ ಪೂರ್ಣ ನಂತರದಲ್ಲಿ ಬೆಳಗ್ಗೆ 7 ಗಂಟೆಯಿಂದ ಹಲವು ಮತಗಟ್ಟೆಗಳಲ್ಲಿ ಮತದಾನ ಚುರುಕಾದರೆ, ಹಲವೆಡೆ ಮಂದಗತಿಯಲ್ಲಿ ಸಾಗಿತ್ತು. ಕ್ಷೇತ್ರ ವ್ಯಾಪ್ತಿಯ 2168 ಮತಗಟ್ಟೆಗಳು ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ 1661 ಮತಗಟ್ಟೆಗಳಿದ್ದು, ಗ್ರಾಮೀಣ ಭಾಗದ ಕೆಲವೆಡೆ ಬಿರುಸಿನ ಮತದಾನ ಕಂಡು ಬರದ್ದರೂ, ನಗರ, ಪಟ್ಟಣ ಪ್ರದೇಶಗಳಲ್ಲಿ ಹಲವುಕಡೆಗಳಲ್ಲಿ ಜನರು ಸರತಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುವುದು ಕಂಡು ಬಂದಿತು.
ಬೇಸಿಗೆ ಅಧಿಕ ತಾಪಮಾನದ ಹಿನ್ನೆಲೆಯಲ್ಲಿ ಮಧ್ಯಾಹ್ನ 12ರ ನಂತರ ವಿವಿಧೆಡೆ ಮತದಾನ ನಿಧಾನಗತಿಗೆ ಜಾರಿತು. ಚಳ್ಳಕೆರೆ ತಾಲೂಕು ಸಾಣೀಕೆರೆ ಬೂತ್ ನಂ. 234ರಲ್ಲಿ ಇವಿಎಂ ಕೈಕೊಟ್ಟಿದ್ದರಿಂದಾಗಿ ಕಲ್ಪಿತ ಮತದಾನ ನಡೆಸಲು ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ. ಕೂಡಲೇ ಸೆಕ್ಟರ್ ಅಧಿಕಾರಿ ಧಾವಿಸಿ ಸಮಸ್ಯೆ ಬಗೆಹರಿಸಿದ ಬಳಿಕ ಸಕಾಲಕ್ಕೆ ಮತದಾನ ಆರಂಭವಾಯಿತು. ಈ ಮತಗಟ್ಟೆಯಲ್ಲಿ ಮಧ್ಯಾಹ್ನ 12.25ರ ವೇಳೆ 752 ಮತದಾರರ ಪೈಕಿ 173 ಮಂದಿ ವೋಟ್ ಹಾಕಿದರು.
ಚಿತ್ರದುರ್ಗದ ಮದಕರಿಪುರ ಮತಗಟ್ಟೆ ಸಂಖ್ಯೆ 75ರಲ್ಲೂ ಮತದಾರರ ಸಂಖ್ಯೆ ಬೆರಳಿಕೆ ಪ್ರಮಾಣದಲ್ಲಿ ಕಂಡು ಬಂದಿದ್ದರೂ ಬೆಳಗ್ಗೆ 11ರ ವೇಳೆ ಇಲ್ಲಿದ್ದ 903 ಮತದಾರರಲ್ಲಿ 131 ಜನರು ವೋಟ್ ಹಾಕಿದ್ದರು. ಚಳ್ಳಕೆರೆ ತಾಲೂಕು ಕುರುಡಿಹಳ್ಳಿ, ಚಳ್ಳಕೆರೆ, ಯರಬಳ್ಳಿ ಮತಗಟ್ಟೆಗಳಲ್ಲಿ ಮಧ್ಯಾಹ್ನ 12.46 ಸಮಯದಲ್ಲಿ ಪರವಾಗಿಲ್ಲ ಎಂಬಂತೆ ಮತದಾನವಾಗಿತ್ತು.
ಚಳ್ಳಕೆರೆಯ ವಿವಿಧ ಮತಗಟ್ಟೆಗಳಿಗೆ ಶಾಸಕ ಟಿ.ರಘುಮೂರ್ತಿ ತೆರಳಿ ಕಾರ‌್ಯಕರ್ತರಿಂದ ಮತದಾನ ಪ್ರಗತಿ ಮಾಹಿತಿ ಪಡೆದರು. ಅನೇಕ ಕಡೆಯುವ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಿ ಸಂತಸ ವ್ಯಕ್ತಪಡಿಸಿದರು.
*ನವ ದಂಪತಿಗಳಿಂದ ಮತದಾನ: ಜಿಲ್ಲೆಯಲ್ಲಿ ನವದಂಪತಿಗಳು ಮತದಾನ ಮಾಡುವ ಮೂಲಕ ತಮ್ಮ ಜವಾಬ್ದಾರಿ ಮೆರೆದಿದ್ದಾರೆ. ಚಿತ್ರದುರ್ಗ ತಾಲೂಕಿನ ಭೀಮಸಮುದ್ರ, ವಿಜಾಪುರದಲ್ಲಿ ಅರುಣ್-ಕಾವ್ಯಾ ಹಾಗೂ ಹಿರಿಯೂರಲ್ಲಿ ಸತ್ಯ-ಪಲ್ಲವಿ ಹಾಗೂ ಚಳ್ಳಕೆರೆ ತಾಲೂಕು ಕಾಟಪ್ಪನಹಟ್ಟಿನಹಟ್ಟಿಯಲ್ಲಿ ಅಶೋಕ್ ಸುಶ್ಮಿತಾ ನವದಂಪತಿ ಮತ ಚಲಾಯಿಸಿದರು. ಫಿಲಿಪೈನ್ಸ್‌ನಲ್ಲಿ ಎಂಬಿಬಿಎಸ್ ಓದುತ್ತಿರುವ ನಿಖಿತಾ ನಗರಕ್ಕೆ ಆಗಮಿಸಿ ಮತ ಹಾಕಿದರು. ಗಣ್ಯರು, ನಾನಾ ಮಠಾಧೀಶರು ಕೂಡ ತಮ್ಮ ಹಕ್ಕನ್ನು ಚಲಾಯಿಸಿದರು.
*ನೆರಳಿನ ಆಸರೆ: ಸುಗಮ ಮತದಾನಕ್ಕಾಗಿ ಜಿಲ್ಲಾ ವ್ಯಾಪ್ತಿಯ 1661 ಮತಗಟ್ಟೆಗಳ ಪೈಕಿ 913ರಲ್ಲಿ ವೆಬ್‌ಕಾಸ್ಟಿಂಗ್ ಹಾಗೂ 339ರಲ್ಲಿ ಮೈಕ್ರೋ ಅಬ್ಸರ್ ವರ್‌ಗಳನ್ನು ನೇಮಕ ಮಾಡಲಾಗಿತ್ತು. ಮತಗಟ್ಟೆಗಳ ಬಳಿ ನೆರಳಿಗಾಗಿ ಶಾಮಿಯಾನ/ಚಪ್ಪರ ಹಾಕಲಾಗಿತ್ತು. 54 ಮತಗಟ್ಟೆಗಳನ್ನು ವಿ ಶೇಷವಾಗಿ ಅಲಂಕರಿಸಲಾಗಿತ್ತು.
*ಯಾವ ಹೊತ್ತಿಗೆ ಎಷ್ಟು ಮತದಾನ: ಜಿಲ್ಲಾದ್ಯಂತ ಬೆಳಗ್ಗೆ 11ಕ್ಕೆ ಶೇ.21.75, ಮಧ್ಯಾಹ್ನ 1 ಗಂಟೆಗೆ ಶೇ.39.05, 3 ಗಂಟೆಗೆ ಶೇ.52.14 ಮತದಾನವಾಗಿತ್ತು. ಅಂತಿಮವಾಗಿ ಶೇ.73.33ಕ್ಕೆ ತಲುಪಿತು. 2019ರ ಲೋಕಸಭಾ ಚುನಾವಣೆಯಲ್ಲಿ ಇದರ ಪ್ರಮಾಣ 70.8 ಇತ್ತು.
*ಬಿಗಿ ಭದ್ರತೆ: ಮತ ಎಣಿಕೆ ಕಾರ‌್ಯ ನಡೆಯುವರೆಗೆ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಹೊಸ ಕಟ್ಟಡದಲ್ಲಿರುವ ಸ್ಟ್ರಾಂಗ್‌ರೂಂನಲ್ಲಿ ಇವಿಂಗಳು ಭದ್ರವಾಗಿರಿಲಿವೆ. ಶುಕ್ರವಾರ ಬೆಳಗ್ಗೆಯಿಂದಲೇ ಸ್ಟ್ರಾಂಗ್‌ರೂಂ ಇರುವ ಮತ ಎಣಿಕೆ ಕೇಂದ್ರಕ್ಕೆ ಸಿಆರ್‌ಪಿಎಫ್ ಸಿಬ್ಬಂದಿ ಸಹಿತ ಬಿಗಿ ಬಂದೋಬಸ್ತ್ ಒದಗಿಸಲಾಗಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಡಿ-ಮಸ್ಟರಿಂಗ್ ಬಳಿಕ ಸ್ಟ್ರಾಂಗ್‌ರೂಂಗೆ ಇವಿಎಂಗಳನ್ನು ಸಾಗಿಸಿ ಭದ್ರಪಡಿಸಲಾಯಿತು.
ಮತಗಟ್ಟೆ ಅಧಿಕಾರಿ ನಿಧನ: ಚಳ್ಳಕೆರೆ ತಾಲೂಕು ಹೊಟ್ಟೆಪ್ಪನಹಳ್ಳಿ ಬಳಿಯ ಗೊಲ್ಲರಗಟ್ಟಿ ಮತಗಟ್ಟೆಯಲ್ಲಿ ಎಪಿಆರ್‌ಒ ಆಗಿದ್ದ ಶಿಕ್ಷಕಿ ಯಶೋಧಮ್ಮ (58) ಹೃದಯಾಘಾತದಿಂದ ನಿಧನ ಹೊಂದಿದರು.
ಪೂಜೆ ಸಲ್ಲಿಕೆ: ಚಿತ್ರದುರ್ಗ ಉಚ್ಚಂಗಿಯಲ್ಲಮ್ಮ ದೇವಸ್ಥಾನದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಪೂಜೆ ಸಲ್ಲಿಸಿದರು. ಪಕ್ಷದ ಪದಾಧಿಕಾರಿಗಳಾದ ಟಿ.ಜಿ.ನರೇಂದ್ರನಾಥ್, ನಾಗರಾಜ್ ಬೇದ್ರೆ, ಶಂಭು ಇತರರಿದ್ದರು.

ಸೋಲು-ಗೆಲುವಿನ ಚರ್ಚೆ
ಅನೇಕ ಕಡೆ ಯಾರ ಗೆಲುವು-ಸೋಲಿನ ಚರ್ಚೆ ಸಾಗಿತ್ತು. ಇಂಥ ಕಾರಣಕ್ಕೆ ಇವರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ವಾದ ಪ್ರತಿವಾದದಲ್ಲಿ ಜನರು ಮುಳುಗಿದ್ದರೆ, ಇನ್ನು ಕೆಲವರು ಅವರು ವೋಟಿಗೆ ಇಷ್ಟು ದುಡ್ಡು ಕೊಟ್ಟಿದರೆ, ಇವರು ಒಂದು ಮನೆಗೆ ಇಷ್ಟು ದುಡ್ಡು ಕೊಟ್ಟಿದ್ದಾರೆಂಬ ಮಾತುಗಳು ತೇಲಿ ಬಂದವು.