ಜಿಲ್ಲೆ

ಜೂಜಾಟದಿಂದ ಬದುಕು ನಾಶದ ಜಾಗೃತಿ

ದಾವಣಗೆರೆ: ಕೋಳಿ ಜೂಜಾಟ ಪಂದ್ಯದ ಸನ್ನಿವೇಶವನ್ನು ಜಾನಪದ ಗೀತೆ, ನೃತ್ಯದೊಂದಿಗೆ ಪ್ರದರ್ಶಿಸುವ ಮೂಲಕ ಕೋಲಾರ ಜಿಲ್ಲಾ ತಂಡ ಪ್ರತಿನಿಧಿಸಿದ ಕಲಾವಿದರು ಬದುಕು ನಾಶವಾಗುವ ಕುರಿತು ಜಾಗೃತಿ ಮೂಡಿಸಲು ಮುಂದಾದರು.

ಬಿಐಇಟಿ ಇಂಜಿನಿಯರಿಂಗ್ ಕಾಲೇಜು ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಯುವ ಜನೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಜಾನಪದ ನೃತ್ಯ ಸ್ಪರ್ಧೆ ಪ್ರತಿಭೆ ಅನಾವರಣಕ್ಕೂ ಉತ್ತಮ ವೇದಿಕೆಯಾಯಿತು.

ಕೋಲಾರ ಜಿಲ್ಲೆ ಸೇರಿ ಆಂಧ್ರ ಗಡಿಭಾಗದಲ್ಲಿ ಪ್ರಚಲಿತದಲ್ಲಿರುವ ಕೋಳಿ ಪಂದ್ಯ ಗ್ರಾಮೀಣ ಭಾಗದ ಅತ್ಯಂತ ಮೋಜಿನ ಆಟಗಳಲ್ಲೊಂದು. ಇದರಲ್ಲಿ ಗ್ರಾಮಸ್ಥರು ಹಣ, ಬಂಗಾರ ಇನ್ನಿತರೆ ವಸ್ತುಗಳನ್ನು ಪಣದಲ್ಲಿಟ್ಟು ಸೋಲುಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ನಲುಗುವ ಸನ್ನಿವೇಶ ಕಣ್ಣಾಲೆಗಳನ್ನು ಒದ್ದೆಯಾಗಿಸಿದವು.

ಹಣ, ಆಸ್ತಿ ಕಳೆದುಕೊಂಡ ಬಳಿಕ ಹೆಣ್ಮಕ್ಕಳು ಕುಟುಂಬದ ಪುರುಷರಿಗೆ ಕೋಳಿ ಪಂದ್ಯ ಆಡದಂತೆ, ಎಚ್ಚರಿಸುವ ದೃಶ್ಯ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.

ಪ್ರಸ್ತುತ ಸಮಾಜದಲ್ಲಿ ಆನ್‌ಲೈನ್ ಬೆಟ್ಟಿಂಗ್ ಭೂತಕ್ಕೆ ರಾಜ್ಯದಲ್ಲಿ ಅನೇಕರು ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇವೆ. ಈ ಹಿನ್ನಲೆಯಲ್ಲಿ ಕೋಳಿ ಸೇರಿ ಯಾವುದೇ ರೀತಿಯ ಪಂದ್ಯಕ್ಕೆ ಬೆಟ್ಟಿಂಗ್‌ನಲ್ಲಿ ತೊಡಗದಂತೆ ಎಚ್ಚರಿಸಲು ಈ ರೂಪಕ ಪ್ರಮುಖ ಆಕರ್ಷಣೆಯಾಯಿತು.