ಬಳ್ಳಾರಿ : ಜಿಲ್ಲೆಯಲ್ಲಿ ಈಶಾನ್ಯ ಪದವೀಧರರ ಮತದಾನ ಜೂ. 3 ರಂದು ನಡೆಯಲಿದ್ದು, ಒಟ್ಟು 24 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಮಾಹಿತಿ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲೆಯ ಸಂಡೂರು, ಕಂಪ್ಲಿ, ಸಿರುಗುಪ್ಪ, ಬಳ್ಳಾರಿ ಗ್ರಾಮೀಣ ಹಾಗೂ ಬಳ್ಳಾರಿ ನಗರ ಸೇರಿ ಮಹಿಳೆಯರು 9198, ಪುರುಷರು 14981, ಇತರೆ ಸೇರಿ ಒಟ್ಟಾರೆ 24,183 ಪದವೀಧರ ಮತದಾರರಿದ್ದಾರೆ. ಪಿಆರ್‌ಒ, ಎಪಿಆರ್‌ಒ, ಪಿಒ ಮತ್ತು ಮೈಕ್ರೋ ವೀಕ್ಷಕರು ಸೇರಿದಂತೆ ಒಟ್ಟು 140 ಚುನಾವಣೆ ಅಧಿಕಾರಿಗಳನ್ನು ನೇಮಿಸಲಾಗಿದೆ. 06 ಮತಗಟ್ಟೆ ಕೇಂದ್ರಗಳಲ್ಲಿ ವಿಡಿಯೋಗ್ರಾಫಿ ಮತ್ತು 18 ಮತಗಟ್ಟೆ ಕೇಂದ್ರಗಳಲ್ಲಿ ವೆಬ್ಕಾಸ್ಟಿಂಗ್ ಅಳವಡಿಸಿ ನೇರವಾಗಿ ವೀಕ್ಷಿಸಲಾಗುವುದು. ಜೂ. 02 ರಂದು ಆಯಾ ತಾಲ್ಲೂಕು ತಹಶೀಲ್ದಾರ ಕಚೇರಿಗಳಲ್ಲಿ ಮಸ್ಟರಿಂಗ್ ಕಾರ್ಯ ನಡೆಯಲಿದೆ. ಜಿಲ್ಲೆಯಲ್ಲಿ ನೋಂದಾಯಿತರಾದ ಎಲ್ಲಾ ಪದವೀಧರ ಮತದಾರರು ತಪ್ಪದೇ ಮತ ಚಲಾಯಿಸಬೇಕು ಈ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂದರು. ಎಎಸ್ಪಿ ಕೆ.ಪಿ.ರವಿಕುಮಾರ್ ಇದ್ದರು.