ಜಿಲ್ಲೆ

ಜೂ.27ರಂದು ಕೆಂಪೇಗೌಡರ ಜಯಂತ್ಯುತ್ಸವ :ಜಿಲ್ಲೆಯಲ್ಲಿ ಇರುವುದು ಒಂದೇ ಪುತ್ಥಳಿ

ಹಾಸನ: ಜೂನ್ 27ರ ಗುರುವಾರ ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಅವರ 515ನೇ ಜಯಂತ್ಯುತ್ಸವ ಆಚರಣೆಗೆ ರಾಜ್ಯ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾ ಕೇಂದ್ರಗಳು ಸೇರಿದಂತೆ ಪ್ರತಿ ತಾಲೂಕು ಆಡಳಿತದ ವತಿಯಿಂದ ಅದ್ಧೂರಿಯಾಗಿ ಕೆಂಪೇಗೌಡ ಆಚರಣೆಗೆ ಕರೆ ನೀಡಿದೆ.
ಕಳೆದ ವರ್ಷ ಮೊದಲ ಬಾರಿಗೆ ಕೆಂಪೇಗೌಡ ಜಯಂತಿಯನ್ನು ಹಾಸನ ನಗರದಲ್ಲಿ ರಾಜ್ಯ ಸರ್ಕಾರ ಆಯೋಜನೆ ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆಂಪೇಗೌಡ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಿತ್ತು. ಮೊದಲ ಬಾರಿಗೆ ಬೆಂಗಳೂರು ಬಿಟ್ಟು ಹೊರ ಜಿಲ್ಲೆಯಲ್ಲಿ ಕೆಂಪೇಗೌಡ ಜಯಂತಿ ಆಚರಿಸಿದ ಹಾಸನ ನಗರದಲ್ಲಿ ಕೆಂಪೇಗೌಡರ ಒಂದು ಪ್ರತಿಮೆ ಇಲ್ಲದಿರುವುದು ವಿಷಾದದ ಸಂಗತಿಯಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಬೇಲೂರು ಹೊರತುಪಡಿಸಿ ಉಳಿದ ಯಾವುದೇ ಭಾಗದಲ್ಲೂ ಕೆಂಪೇಗೌಡರ ಪುತ್ಥಳಿ ಇಲ್ಲ.
ಹಾಸನ ನಗರದಲ್ಲಿ ಹಲವಾರು ಪ್ರಮುಖ ವೃತ್ತಗಳಿದ್ದು, ಇವುಗಳಲ್ಲಿ ಯಾವುದಾದರೂ ಒಂದು ವೃತ್ತದಲ್ಲಿ ಕೆಂಪೇಗೌಡರ ಪುತ್ಥಳಿ ನಿರ್ಮಿಸುವಂತೆ ಈಗಾಗಲೇ ಒಕ್ಕಲಿಗರ ಸಂಘದಿಂದ ಸಂಬಂಧಪಟ್ಟ ನಗರಸಭೆ ಹಾಗೂ ಸ್ಥಳೀಯ ಶಾಸಕರ ಗಮನಕ್ಕೂ ತರಲಾಗಿದೆ. ಪ್ರಮುಖವಾಗಿ ನಗರದ ಹೃದಯಭಾಗವಾದ ಎನ್‌ಆರ್ ವೃತ್ತದಲ್ಲಿ ನಿರ್ಮಾಣಕ್ಕೆ ಒತ್ತಾಯಗಳು ಕೇಳಿಬಂದಿವೆ. ಮೌನ್ನೆ ನಡೆದ ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿದ್ದು, ಜಿಲ್ಲಾಡಳಿತ ಹಾಗೂ ನರಗಸಭೆಯಿಂದ ಪುತ್ಥಳಿ ನಿರ್ಮಾಣಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ವರ್ಷದಲ್ಲಿ ಕಾಮಗಾರಿ ಆರಂಭಿಸುವ ಭರವಸೆ ನೀಡಿದೆ ಎನ್ನಲಾಗಿದೆ.
ಪ್ರತಿ ತಾಲೂಕಿಗೂ ಒಂದು ಲಕ್ಷ ರೂ.
ರಾಜ್ಯ ಸರ್ಕಾರ ಕೆಂಪೇಗೌಡ ಜಯಂತಿಯನ್ನು ಬೆಂಗಳೂರಿನಲ್ಲಿ ಆಯೋಜಿಸಿದೆ. ಉಳಿದಂತೆ ಪ್ರತಿ ತಾಲೂಕು ಆಡಳಿತಗಳಿಂದ ಕೆಂಪೇಗೌಡ ಜಯಂತಿ ಅಚರಣೆಗೆ 1 ಲಕ್ಷ ರೂ. ಹಾಗೂ ಜಿಲ್ಲಾ ಕೇಂದ್ರಗಳಿಗೆ 1.5 ಲಕ್ಷ ರೂ. ಘೋಷಿಸಿದ್ದು, ಈ ಹಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿಂತನ-ಮಂಥನ, ಅಧಿವೇಶನಗಳು ಹಾಗೂ ಇತರೆ ಸಂಬಂಧಿತ ಕಾರ್ಯಕ್ರಮಗಳ ಆಯೋಜನೆ ಮೀಸಲಿರಿಸಲಾಗಿದೆ.
ಹಾಸನಾಂಬ ಕಲಾಭವನದಲ್ಲಿ ಜಯಂತ್ಯುತ್ಸವ
ಕಳೆದ ವರ್ಷ ಇಡೀ ರಾಜ್ಯ ಸರ್ಕಾರವೇ ಹಾಸನ ನಗರಕ್ಕೆ ಬಂದು ಕೆಂಪೇಗೌಡ ಜಯಂತ್ಯುತ್ಸವ ಆಚರಿಸಿತ್ತು. ಈ ವರ್ಷ ಜಿಲ್ಲಾಡಳಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಯಂತ್ಯತ್ಸವ ಆಚರಣೆಗೆ ಮುಂದಾಗಿದೆ. ವಿವಿಧ ಕಲಾತಂಡಗಳು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಸಭಾ ಭವನ ತಲುಪಲಿವೆ.
1995ರಲ್ಲಿ ಬೇಲೂರಿನಲ್ಲಿ ಪ್ರತಿಮೆ ನಿರ್ಮಾಣ
ಬೇಲೂರಿನಲ್ಲಿ 1995ರ ಸಮಯದಲ್ಲಿಯೇ ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಪಟ್ಟಣದ ದೇವಸ್ಥಾನ ರಸ್ತೆಯಲ್ಲಿ ಪ್ರತಿಮೆ ಉದ್ಘಾಟಿಸಲಾಯಿತು. ಆದಿಚುಂಚನಗಿರಿ ಮಠದ ಬಾಲಗಂಗಾಧರ ನಾಥ ಸ್ವಾಮೀಜಿ, ಚಲನಚಿತ್ರ ನಟ ಅಂಬರೀಷ್ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅಂದು ಎಚ್.ಕೆ. ಕುಮಾರಸ್ವಾಮಿ ಅವರು ಬೇಲೂರು ಕ್ಷೇತ್ರದ ಶಾಸಕರಾಗಿದ್ದರು. ಎಂ.ಎ. ನಾಗರಾಜ್ ಕೆಂಪೇಗೌಡ ಸೇವಾ ಸಮಿತಿ ಅಧ್ಯಕ್ಷರಾಗಿದ್ದರು.

ಈ ಹಿಂದೆ ನಗರದ ಎಸ್.ಎಂ. ಕೃಷ್ಣ ಬಡಾವಣೆಯಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಆ ಬಡಾವಣೆಯ ನಿವಾಸಿಗಳೆಲ್ಲಾ ಸೇರಿ ಸಮಿತಿ ಮಾಡಿಕೊಂಡು ಮನವಿ ಮಾಡಿದ್ದರು. ಮೌನ್ನೆ ನಡೆದ ಪೂರ್ವಭಾವಿ ಸಭೆಯಲ್ಲೂ ಈ ವಿಷಯ ಪ್ರಮುಖವಾಗಿ ಚರ್ಚೆಗೆ ಬಂದಿತು. ಸ್ಥಳೀಯ ಸಂಸ್ಥೆ ಹಾಗೂ ಮುಖಂಡರು ಸ್ಥಳ ಗುರುತಿಸಿ ಮನವಿ ನೀಡಿದರೆ ಅಲ್ಲಿಯೇ ಪ್ರತಿಮೆ ನಿರ್ಮಾಣ ಮಾಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರೆ. ಮುಂದಿನ ವರ್ಷದ ಕೆಂಪೇಗೌಡ ಜಯಂತಿಯ ವೇಳೆಗೆ ಪ್ರತಿಮೆ ನಿರ್ಮಾಣವಾಗಲಿದೆ.
ಎಚ್.ಪಿ. ಸ್ವರೂಪ್ ಪ್ರಕಾಶ್ ಶಾಸಕರು, ಹಾಸನ

ನಗರದ ಎನ್‌ಆರ್ ವೃತ್ತದಲ್ಲಿ ಕೆಂಪೇಗೌಡ ಅವರ ಪುತ್ಥಳಿ ಸ್ಥಾಪನೆ ಮಾಡುವಂತೆ ಈಗಾಗಲೇ ನಗರಸಭೆಗೆ ಮನವಿ ಮಾಡಲಾಗಿದೆ. ಹಾಗೆಯೇ ಸೋಮವಾರ ಜಿಲ್ಲಾಧಿಕಾರಿ, ಸ್ಥಳೀಯ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಕೆಂಪೇಗೌಡ ಜಯಂತ್ಯುತ್ಸವ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದ್ದು, ಶೀಘ್ರದಲ್ಲೇ ಪುತ್ಥಳಿ ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

  • ಸುಮುಖ ರಘುಗೌಡ ನಿರ್ದೇಶಕರು, ರಾಜ್ಯ ಒಕ್ಕಲಿಗರ ಸಂಘ