ಜಿಲ್ಲೆ

ಜೂ.23 ರಿಂದ ಉಚಿತ ಕೃತಕ ಕಾಲು ಹಾಗೂ ಮುಂಗೈ ಜೋಡಣೆಯ ಶಿಬಿರ

ಹಾಸನ: ನಗರದ ಸಂಜೀವಿನಿ ಆಸ್ಪತ್ರೆಯಲ್ಲಿ ಜೂ.23 ರಿಂದ 3 ದಿನಗಳ ಕಾಲ ಉಚಿತ ಕೃತಕ ಕಾಲು ಹಾಗೂ ಮುಂಗೈ ಜೋಡಣೆಯ ಬೃಹತ್ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಹಾಗೂ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ತಿಳಿಸಿದರು.
ಮೈಕ್ರೋ ಲ್ಯಾಬ್ಸ್ ಪ್ರಾಯೋಜಕತ್ವದಲ್ಲಿ ರೋಟರಿ ಕ್ಲಬ್ ಹಾಸನ ಹೊಯ್ಸಳ, ರೋಟರಿ ಕ್ಲಬ್ ಹಾಸನ ಟೈಗರ್, ಐಎಫ್‌ಎಂಆರ್ ಹಾಸನ, ಸಂಜೀವಿನಿ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಶ್ರೀ ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತ ಸಮಿತಿ, ಜೈಪುರ್ ಸಹರ ಗ್ರೂಪ್ ಆಫ್ ಇಂಡಸ್ಟ್ರೀಸ್, ಇನ್ ವೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್, ಯೂತ್ ಹ್ಯಾಂಡ್ ಫೌಂಡೇಶನ್, ಕನ್ನಡ ರಕ್ಷಣಾ ವೇದಿಕೆ, ಭಾರತ್ ಸೇವಾ ದಳ ಸಂಘಟನೆಗಳು ಒಟ್ಟಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು
ಮುಂಗೈ, ಕೃತಕ ಕಾಲುಗಳು, ಪೊಲಿಯೋ ಪೀಡಿತರಿಗಾಗಿ ಕ್ಯಾಲಿಪರ್ಸ್ ಗಳನ್ನು ಉಚಿತವಾಗಿ ಕೊಡಲಾಗುವುದು. ಅಗತ್ಯ ಇರುವವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.ಹೆಚ್ಚಿನ ಮಾಹಿತಿಗಾಗಿ 9844046527,9449644267, ಗೆ ಸಂಪರ್ಕಿಸಬಹುದಾಗಿದೆ ಎಂದರು.
ಮೈಕ್ರೋ ಲ್ಯಾಬ್ ಕಂಪನಿ ಸಹಯೋಗದಲ್ಲೇ ಹಿಂದೆ ನಮ್ಮ ತಂದೆ ದಿ.ಎಚ್.ಎಸ್.ಪ್ರಕಾಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಇದೀಗ ಈ ಶಿಬಿರ ನಡೆಸಲಾಗುತ್ತಿದೆ. ರೋಟರಿಯವರು ಸಂಜೀವಿನಿ ಆಸ್ಪತ್ರೆಗೆ 6 ಡಯಾಲಿಸಿಸ್ ಯಂತ್ರ ನೀಡಿದ್ದರು. ಅದಕ್ಕಾಗಿ ಅವರಿಗೆ ಧನ್ಯವಾದ, ಇವುಗಳ ಸಹಾಯದಿಂದ ಕಷ್ಟ ಎಂದು ಬಂದ ರೋಗಿಗಳಿಗೆ ರಿಯಾಯ್ತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಶಿಬಿರದ ಆಯೋಜಕರಾದ ಮೋಹನ್ ಮಾತನಾಡಿ, ಇದು 4ನೇ ವರ್ಷದ ಕಾರ್ಯಕ್ರಮ, ಈಗಾಗಲೇ 150 ಮಂದಿ ನೊಂದಣಿ ಮಾಡಿಕೊಂಡಿದ್ದಾರೆ. ಎಷ್ಟೇ ಮಂದಿ ಬಂದರೂ ಜೋಡಣೆ ಮಾಡಲಾಗುವುದು. ವಿವಿಧೆಡೆಗಳಿಂದ ಬರುವವರಿಗೆ ಊಟ, ವಸತಿ ವ್ಯವಸ್ಥೆ ಸಹ ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಉಪಾಧ್ಯಕ್ಷ ಎಚ್.ಆರ್. ಸುರೇಶ್, ಖಜಾಂಚಿ ಎಚ್. ಎನ್.ದೇವೇಗೌಡ, ಮಾಜಿ ಅಧ್ಯಕ್ಷ ಎಚ್.ಜೆ. ಗಣೇಶ್, ಕಾರ್ಯಾಧ್ಯಕ್ಷ ಡಿ.ಅರುಣ್ ಕುಮಾರ್, ಬಿ.ಜಿ. ಶ್ರೀಧರ್, ಬಿ.ಎನ್.ಜಯರಾಮ್, ಜಿ.ಎಸ್. ವಿಮಲ ಇತರರು ಇದ್ದರು.