ಜಿಲ್ಲೆ

ಜೂ.21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿ ಸಭೆ

ಹಾಸನ: ಜಿಲ್ಲೆಯಲ್ಲಿ ಜೂ.21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ಮೂಡಿಬರಲು ಅಗತ್ಯ ಸಿದ್ಧತೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕುರಿತು ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ತಮ್ಮಲ್ಲಿರುವ ಚೈತನ್ಯ ಶಕ್ತಿಯನ್ನು ಬಡಿದ್ದೆಬಿಸಲು ಯೋಗ ಸಹಕಾರಿಯಾಗಿದ್ದು, ಸದೃಡ ದೇಹ ಮತ್ತು ಆರೋಗ್ಯವಂತ ಮನಸ್ಸು ಹೊಂದಲು ಸಾಧ್ಯವಾಗುತ್ತದೆ ಎಂದರು.
ಜೂನ್ 21 ರಂದು ಬೆಳಿಗ್ಗೆ 7 ಗಂಟೆಗೆ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಏರ್ಪಡಿಸುವಂತೆ ನಿರ್ದೇಶನ ನೀಡಿದರಲ್ಲದೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಎಲ್ಲಾ ಯೋಗ ಸಂಸ್ಥೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಲು ತಿಸಿದರು.
ಕಾರ್ಯಕ್ರಮ ಜರುಗುವ ಮೈದಾನದಲ್ಲಿ ವೇದಿಕೆ ನಿರ್ಮಾಣ, ಸ್ವಚ್ಚತೆ, ನೆಲಹಾಸು ವ್ಯವಸ್ಥೆಗೆ ನಗರಸಭೆಯಿಂದ ಕ್ರಮವಹಿಸುವಂತೆ ತೀಲಸಿದರು. ಕಾರ್ಯಕ್ರಮಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗದಂತೆ ನಿಗಾವಹಿಸಲು ಕೆ.ಪಿ.ಡಿ.ಸಿ.ಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಜೂ.20 ರವರಿಗೆ ಯೋಗೋತ್ಸವ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡುವ ಮೂಲಕ ಸಾಕಾರಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಯೋಗ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯೋಗಾಥಾನ ಕಾರ್ಯಕ್ರಮ ಆಯೋಜನೆಗೆ ಕ್ರಮವಹಿಸಲು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಸ್ವಾಮಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೂಸೆಬ್ಯಾರಿ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಯೋಗ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.