ಜಿಲ್ಲೆ

ಜೂ.1ರವರೆಗೆ ಎಸ್‌ಐಟಿ ವಶಕ್ಕೆ ನವೀನ್, ಚೇತನ್

ಹಾಸನ: ಪೆನ್‌ಡ್ರೈವ್ ಹಂಚಿಕೆ ಆರೋಪದ ಮೇಲೆ ಮಂಗಳವಾರ ಬೆಂಗಳೂರಿನಲ್ಲಿ ಎಸ್‌ಐಟಿ ಬಂಧನಕ್ಕೆ ಒಳಗಾಗಿರುವ ಬೇಲೂರಿನ ನಲ್ಕೆ ಗ್ರಾಮದ ನವೀಸ್ ಎಸ್ ಗೌಡ ಹಾಗೂ ಚೇತನ್ ಅವರನ್ನು ಬುಧವಾರ ಎಸ್‌ಐಟಿ ಅಧಿಕಾರಿಗಳು ಜಿಲ್ಲಾ ನ್ಯಾಯಾಲಯ ಮುಂದೆ ಹಾಜರುಪಡಿಸಿದರು. ಬಳಿಕ ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನು ಜೂ.1ರವರೆಗೆ ಎಸ್‌ಐಟಿ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ನೀಡಿತು.
ಪೆನ್‌ಡ್ರೈವ್ ಹಂಚಿಕೆ ಸಂಬಂಧ ಏ.23ರಂದು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ವಕೀಲ ಪೂರ್ಣಚಂದ್ರ ತೇಜಸ್ವಿ ಅವರು ದೂರು ದಾಖಲಿಸಿದ್ದರು. ಬಳಿಕ ತಲೆ ಮರೆಸಿಕೊಂಡಿದ್ದ ನವೀನ್ ಹಾಗೂ ಚೇತನ್ ಮಂಗಳವಾರ ಬೆಂಗಳೂರಿನ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಬಂದಾಗ ಕೋರ್ಟ್ ಆವರಣದಲ್ಲಿ ಇಬ್ಬರನ್ನು ಎಸ್‌ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡರು. ಮಂಗಳವಾರ ರಾತ್ರಿಯೇ ಇಬ್ಬರನ್ನೂ ಹಾಸನಕ್ಕೆ ಕರೆ ತರಲಾಯಿತು.
ಬುಧವಾರ ಬೆಳಗ್ಗೆ ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಆನಂತರ ಇಬ್ಬರ ಮನೆಗಳಿಗೂ ತೆರಳಿದ ಎಸ್‌ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿದರು. ಬುಧವಾರ ಮಧ್ಯಾಹ್ನ ಇಬ್ಬರನ್ನು ಹಾಸನದ 2ನೇ ಅಧಿಕ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಎಸ್‌ಐಟಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಾಲಯ ನವೀನ್ ಹಾಗೂ ಚೇತನ್ ಇಬ್ಬರನ್ನು ಜೂ.1ರವರೆಗೆ ಎಸ್‌ಐಟಿ ವಶಕ್ಕೆ ನೀಡಿತು.

ದಿಂಬು, ಹಾಸಿಗೆ ಕೊಂಡೊಯ್ದ ಅಧಿಕಾರಿಗಳು:
ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಎಸ್‌ಐಟಿ ಮುಂದೆ ಹಾಜರಾಗುವುದಾಗಿ ತಿಳಿಸಿದ ಬೆನ್ನಲ್ಲೆ ಅವರ ವಿಚಾರಣೆಗೆ ಪೂರಕವಾದ ಸಾಕ್ಷ್ಯಾಧಾರ ಸಂಗ್ರಹ ಕಾರ್ಯವನ್ನು ಎಸ್‌ಐಟಿ ತನಿಖಾ ತಂಡ ಮಂಗಳವಾರ ನಡೆಸಿತು.
ಮಂಗಳವಾರ ಸಂಜೆಯಿಂದ ನಗರದ ಸಂಸದರ ನಿವಾಸ, ಹೊಳೆನರಸೀಪುರದ ರೇವಣ್ಣ ಅವರ ನಿವಾಸ ಹಾಗೂ ಚನ್ನರಾಯಪಟ್ಟಣ ತಾಲೂಕು ಗನ್ನಿಕಡದ ಫಾರ್ಮ್‌ಹೌಸ್‌ನಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಿದ 12ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಎಫ್‌ಎಸ್‌ಎಲ್ ತಂಡ ಮೂರೂ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜತೆಗೆ ಎಫ್‌ಎಸ್‌ಎಲ್ ತಂಡ ಕೂಡ ಇಂಚಿಂಚೂ ಜಾಲಾಡಿ ಪ್ರಕರಣಕ್ಕೆ ಪೂರಕವಾದ ಮಹ್ವತದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ.
ನಗರದ ಸಂಸದರ ನಿವಾಸದಲ್ಲಿ ಸತತ 10 ಗಂಟೆ ಕಾಲ ಎಫ್‌ಎಸ್‌ಎಲ್ ತಂಡ ಪರಿಶೀಲನೆ ನಡೆಸಿತು. ಪ್ರಜ್ವಲ್‌ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಬೆಡ್‌ಶಿಟ್, ಕರವಸ್ತ್ರ ಹಾಗೂ ಇತರೆ ವಸ್ತುಗಳನ್ನು ಸಂಗ್ರಹಿಸಿ ಬುಧವಾರ ಮುಂಜಾನೆ ಬೆಂಗಳೂರು ಕಡೆ ಪ್ರಯಾಣ ಬೆಳೆಸಿತು.
ಪ್ರಮುಖವಾಗಿ ಹಾಸನದ ಸಂಸದರ ನಿವಾಸದಲ್ಲೇ ಅತ್ಯಾಚಾರ ನಡೆದಿದೆ ಹಾಗೂ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಸಂತ್ರಸ್ತೆಯರು ದೂರು ನೀಡಿರುವುದರಿಂದ ಇದನ್ನು ಸಾಕ್ಷೀಕರಿಸುವ ದಾಖಲೆಗಳನ್ನು ಎಸ್‌ಐಟಿ ಹೆಕ್ಕಿದೆ ಎನ್ನಲಾಗಿದೆ. ಅದರಲ್ಲೂ ಪ್ರಜ್ವಲ್‌ರೇವಣ್ಣ ಮಲಗುತ್ತಿದ್ದ ಸಂಸದರ ನಿವಾಸದ ಮೊದಲ ಮಹಡಿಯಲ್ಲಿರುವ ಕೋಣೆಯಲ್ಲಿ ಹೆಚ್ಚಿನ ಸಮಯ ಶೋಧ ಕಾರ್ಯ ನಡೆಸಿತು ಎಂದು ಮೂಲಗಳು ತಿಳಿಸಿವೆ.