ಚಿತ್ರದುರ್ಗ: ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳ ವಿಲೇವಾರಿ ಕುರಿತು ಪ್ರಗತಿ ಪರಿಶೀಲಿಸಬೇಕಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಹೇಳಿದರು.
ಹೊಸದಾಗಿ ಆಯುಕ್ತರಾಗಿ ನೇಮಕವಾದ ಬಳಿಕ, ಮತ್ತೊಬ್ಬ ಹೊಸ ಆಯುಕ್ತ ಎಸ್. ರಾಜಶೇಖರ್ ಅವರೊಂದಿಗೆ ಪ್ರಥಮ ಬಾರಿಗೆ ಚಿತ್ರದುರ್ಗಕ್ಕೆ ಭೇಟಿ ನೀಡಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ಕೆಡಿಪಿ ಸಭೆಯಲ್ಲಿ ಅರ್ಜಿಗಳ ವಿಲೇ ಪ್ರಗತಿ ಪರಿಶೀಲಿಸುವುದಾಗಿ ಹೇಳಿದ್ದಾರೆ. ಇದು ರಾಜ್ಯದ ಎಲ್ಲ ಜಿಲ್ಲೆಗಳ ಕೆಡಿಪಿ ಸಭೆಯಗಳಲ್ಲೂ ಚರ್ಚೆಯಾಗಬೇಕೆಂದು ಸಲಹೆ ನೀಡಿದರು.
ಆಯೋಗದ ಮುಂದಿದ್ದ 54 ಸಾವಿರ ದ್ವಿತೀಯ ಮೇಲ್ಮನವಿ ಅರ್ಜಿಗಳ ಪೈಕಿ, ಕಳೆದ ಮಾರ್ಚ್‌ನಿಂದ ಈವರೆಗೆ 8 ಸಾವಿರ ಅರ್ಜಿಗಳನ್ನು ವಿಲೇ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ 787 ಮೇಲ್ಮನವಿ ಪ್ರಕರಣಗಳಿವೆ. ಆರ್‌ಡಿಪಿಆರ್ 325, ಕಂದಾಯ 117, ಅರಣ್ಯ 55, ಸಮಾಜ ಕಲ್ಯಾಣ 53, ನಗರಾಭಿವೃದ್ಧಿ 46, ಜಲಸಂಪನ್ಮೂಲ 28, ಗೃಹ 19, ಹಣಕಾಸು, ಸಾರಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಬಂಧಿಸಿದಂತೆ ತಲಾ ಒಂದೊಂದು ಮೇಲ್ಮನವಿ ಅರ್ಜಿಗಳಿವೆ. ಈ ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಜೂನ್‌ವರೆಗೆ ಸಲ್ಲಿಕೆಯಾಗಿದ್ದ 1061 ಅರ್ಜಿಗಳ ಪೈಕಿ 223 ಬಾಕಿ ಇವೆ. ಜಿಲ್ಲೆ ಮಾಹಿತಿ ಅಧಿಕಾರಿಗಳ ಕಾರ್ಯ ಖುಷಿ ತರಿಸಿದೆ ಎಂದರು.
ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗಿ 20 ವರ್ಷಗಳಾಗಿವೆ. ಮಾಹಿತಿ ಶುಲ್ಕ ಪರಿಷ್ಕರಣೆಗೆ ರಾಜ್ಯಆಡಳಿತ ಸುಧಾರಣ ಸಮಿತಿ ಶಿಫಾರಸು ಮಾಡಿದೆ. ಜುಲೈ ಮೊದಲ ವಾರ ನಡೆಯಲಿರುವ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಚರ್ಚಿಸಿ,ಈ ಕುರಿತ ನಿರ್ಧಾರದ ಬಳಿಕ ಪರಿಷ್ಕರ ಣೆಗೆ ಪ್ರಸ್ತಾವನೆ ಸಲ್ಲಿಕೆಯಾಗಲಿದೆ. ಅರ್ಜಿ ಶುಲ್ಕವನ್ನು 10 ರೂ.ಗಳಿಂದ 25 ಅಥವಾ 50 ರೂ., ಸಿಡಿ ಬದಲು ಪೆನ್‌ಡ್ರೈವ್‌ಗೆ ದರ ನಿಗದಿ, ಒಂದು ಪುಟಕ್ಕೆ 2 ರೂ. ಬದಲು 5 ರೂ.ಗೆ ಹೆಚ್ಚಿಸಲು ಚಿಂತಿಸಲಾಗಿದೆ ಎಂದರು.
ಬಿಪಿಎಲ್ ಕಾರ್ಡುದಾರರಿಗೆ 100 ಪುಟಗಳ ಮಾಹಿತಿಗೆ ಶುಲ್ಕವಿಲ್ಲ. ಆದರೆ, ಮಾಹಿತಿಗೆ ಅರ್ಜಿ ಸಲ್ಲಿಸುವಾಗ, ಬಿಪಿಎಲ್ ಕಾರ್ಡ್ ಜೆರಾಕ್ಸ್ ಜತೆಗೆ ಆದಾಯ ಪ್ರಮಾಣ ಪತ್ರದ ಮೂಲ ಪ್ರತಿ ಲಗತ್ತಿಸಬೇಕು. ಸಾರ್ವಜನಿಕ ಹಿತಾಸಕ್ತಿ ಇಲ್ಲದ, ಅಧಿಕಾರಿಗಳಿಗೆ ತೊಂದರೆ ನೀಡಲು ಅರ್ಜಿ ಸಲ್ಲಿಸುತ್ತಿದ್ದ 26 ಜನರನ್ನು ಆಯೋಗ ಕಪ್ಪು ಪಟ್ಟಿಗೆ ಸೇರಿಸಿದೆ. ಇದರಲ್ಲಿ ಚಿತ್ರದುರ್ಗ ಜಿಲ್ಲೆಯ ಒಬ್ಬರಿದ್ದಾರೆ. ಮಾಹಿತಿ ಒದಗಿಸಿದರೆ ಬ್ಲಾೃಕ್‌ಮೇಲ್ ದೂರುಗಳಿರುವುದಿಲ್ಲ. ಲಭ್ಯ ಮಾಹಿತಿಯನ್ನು ಅಧಿಕಾರಿಗಳು ಕೂಡಲೇ ಕೊಡಬೇಕು. ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಕಾಲ, ಕಾಲಕ್ಕೆ ಪ್ರಕಟಿಸಿದರೆ ಅರ್ಜಿಗಳ ಸಂಖ್ಯೆ ಕಡಿಮೆ ಆಗಲಿದೆ ಎಂದು ರುದ್ರಣ್ಣ ಹೇಳಿದರು.
ಆಯುಕ್ತ ಎಸ್. ರಾಜಶೇಖರ್ ಮಾತನಾಡಿ, ಮಾಹಿತಿ ಹಕ್ಕು ಅರ್ಜಿಯನ್ನು ಅಧಿಕಾರಿಗಳು ತಲೆನೋವೆಂದು ಭಾವಿಸಬಾರದು. ಗೊಂದಲಕ್ಕೂ ಒಳಗಾಗಬಾರದು. ಕಾಯ್ದೆ ಅಧ್ಯಯನ ನಡೆಸಬೇಕು. ಕಾಯ್ದೆ ಮೂಲ ಉದ್ದೇಶ ಆಡಳಿತದಲ್ಲಿ ಪಾರದರ್ಶಕತೆ, ಅಧಿಕಾರಿಗಳ ಹೊಣೆ, ಕೆಲಸಗಳಿಗೆ ಉತ್ತರದಾಯಿತ್ವ ತರುವುದಾಗಿದೆ ಎಂದರು.
ಜಿಪಂ, ಜಿಲ್ಲಾಡಳಿತ ಹಿರಿಯ ಅಧಿಕಾರಿಗಳು ಅಧಿಕಾರಿಗಳಿಗೆ ಕಾರ್ಯಾಗಾರ ಏರ್ಪಡಿಸಬೇಕು. ಆದರೆ, ಜನರಲ್ಲಿರುವ ಕಾಯ್ದೆ ಕುರಿತ ಅರಿವಿನ ಕೊರತೆ ಹೋಗಲಾಡಿಸಬೇಕಿದೆ. ಮಾಹಿತಿ ಕೋರುವಂತಹವರನ್ನು ಅಧಿಕಾರಿಗಳು ಬೆದರಿಸುವುದು ಸಲ್ಲದು ಎಂದರು.
ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ಎಡಿಸಿ ಬಿ.ಟಿ. ಕುಮಾರಸ್ವಾಮಿ ಇದ್ದರು.
-----
ಮಾಹಿತಿ ಹಕ್ಕು ಕಾಯ್ದೆ ಅಧಿಕಾರ ಸದ್ಬಳಕೆಯಾಗಲಿ
ಸ್ವಾತಂತ್ರ್ಯದ ತರುವಾಯ ಸಾರ್ವಜನಿಕರಿಗೆ ಆಡಳಿತದ ವಿಷಯಗಳನ್ನು ತಿಳಿದುಕೊಳ್ಳಲು ನೀಡಿರುವ ಮಾಹಿತಿ ಹಕ್ಕು ಕಾಯ್ದೆ ಅಧಿಕಾರ ಸದ್ಬಳಕೆಯಾಗಬೇಕು ಎಂದು ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಎಸ್. ರಾಜಶೇಖರ್ ಹೇಳಿದರು.
ಜಿಲ್ಲೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಪ್ರಥಮ ಮೇಲ್ಮನವಿ ಪ್ರಾಧಿಕಾರ ಅಧಿಕಾರಿಗಳಿಗೆ ಜಿಪಂದಲ್ಲಿ ಶನಿವಾರ ಏರ್ಪಡಿಸಿದ್ದ ಮಾಹಿತಿ ಹಕ್ಕು ಕಾಯ್ದೆ-2005ರ ಪರಿಣಾಮಕಾರಿ ಅನುಷ್ಠಾನ ಕುರಿತ ಜಾಗೃತಿ-ಸಂವಾದ ಜಾಗೃತಿ ಸಭೆೆಯಲ್ಲಿ ಮಾತನಾಡಿ, ಯಾವುದೇ ರೀತಿಯ ವೈಯಕ್ತಿಕ ಮಾಹಿತಿಗಳನ್ನು ಕಾಯ್ದೆಯಡಿ 3ನೇ ವ್ಯಕ್ತಿಗೆ ನೀಡಲು ಬರುವುದಿಲ್ಲ. 2005ರಲ್ಲಿ ಕಾಯ್ದೆ ಜಾರಿಯಾಗಿದ್ದು, ಅದಕ್ಕೂ ಮೊದಲಿನ 20 ವರ್ಷ ಅವಧಿ ದಾಖಲೆಗಳನ್ನು ಮಾತ್ರ ಸಾರ್ವಜನಿಕರು ಪಡೆದುಕೊಳ್ಳಬಹುದು. ನೂರಾರು ವರ್ಷಗಳ ಹಿಂದಿನ ದಾಖಲೆ ನೀಡಲು ಕಾಯ್ದೆ ಕಡ್ಡಾಯಪಡಿಸಿಲ್ಲ ಎಂದರು.
ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಮಾತನಾಡಿ, ಜಿಪಂ, ತಾಪಂ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಒಗಳಿಗೆ ಮಾಹಿತಿ ಕಾಯ್ದೆ ಕುರಿತು ಕಾರ್ಯಾಗಾರ ಏರ್ಪಡಿಸಲಾಗುವುದು ಎಂದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಅಧಿಕಾರಿಗಳು ಲಭ್ಯ ಮಾಹಿತಿಯನ್ನು ಮಾತ್ರ ಸಾರ್ವಜನಿಕರಿಗೆ ನೀಡಬೇಕು. ಪ್ರಥಮ ಮೇಲ್ಮನವಿ ಪ್ರಾಧಿಕಾರ ಅಧಿಕಾರಿಗಳು ನೀಡುವ ಆದೇಶವನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ತಪ್ಪದೇ ಪಾಲಿಸಬೇಕು ಎಂದರು. ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ, ಜಿಪಂ ಡಿಎಸ್ ರಂಗಸ್ವಾಮಿ ಇದ್ದರು.