ಬಾಗಲಕೋಟೆ: ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದಿಂದ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯಕ್ಕೆ ರಾಷ್ಟ್ರೀಯ ವೈದ್ಯಕೀಯ ಪರಿಷತ್ ನಿಂದ ಪರವಾನಿಗೆ ದೊರೆತಿದ್ದು, ನೂತನ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯನ್ನು ಇದೇ ಜು.೩೧ ರಂದು ಲೋಕಾರ್ಪಣೆ ಮಾಡಲಿದ್ದೇವೆ ಎಂದು ಪ್ರತಿಷ್ಠಾನದ ಮುಖ್ಯಸ್ಥ, ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದ್ದಾರೆ.
ಬಾಗಲಕೋಟೆ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಲ ದೇಶದಲ್ಲಿ ೧೧೩ ಮೆಡಿಕಲ್ ಕಾಲೇಜ್ ಗಳು ಅನುಮತಿ ಕೋರಿದ್ದು ಇದರಲ್ಲಿ ೨೬ ಕಾಲೇಜ್‌ಗಳಿಗೆ ಅನುಮತಿ ಸಿಕ್ಕಿದೆ. ಹಾಗೆಯೇ ರಾಜ್ಯದಲ್ಲಿ ೫ ರ ಪೈಕಿ ಮೂರಕ್ಕೆ ಪರವಾನಿಗೆ ಸಿಕ್ಕಿದೆ. ಅದರಲ್ಲಿ ನಮ್ಮ ಬಾಡಗಂಡಿ ಗ್ರಾಮದ ವೈದ್ಯಕೀಯ ಕಾಲೇಜ್ ಸಹ ಒಂದು. ೧೦೦ ಸೀಟುಗಳ ಪ್ರವೇಶಕ್ಕೆ ಅನುಮತಿ ಸಿಕ್ಕಿದೆ ಎನ್ನುವುದು ಹೆಮ್ಮೆಯ ವಿಚಾರ ಎಂದರು.
ಬಾಗಲಕೋಟೆ ಜಿಲ್ಲೆಯಲ್ಲಿ ೨ನೇ ಮೆಡಿಕಲ್ ಕಾಲೇಜ್ ನಮ್ಮದಾಗಿದೆ. ಅನೇಕ ಹಿತೈಷಿಗಳು ಮೆಡಿಕಲ್ ಕಾಲೇಜನ್ನು ನಗರ, ಮಹಾನಗರ ಪ್ರದೇಶದಲ್ಲಿ ತೆರೆಯುವಂತೆ ಸಲಹೆ ನೀಡಿದರು. ಹಳ್ಳಿಯಲ್ಲಿ ಆರಂಭಿಸಿ ತಪ್ಪು ಮಾಡಬೇಡ ಎಂದಿದ್ದರು. ಆದರೆ, ನಾನು ಹಳ್ಳಿಯಿಂದ ಬಂದಿದ್ದು, ಹಳ್ಳಿಯ ಜನರಿಗೆ ಆರೋಗ್ಯ ಸೇವೆ ದೊರೆಯಬೇಕೆಂದು ನನ್ನ ಹುಟ್ಟೂರಾದ ಬಾಡಗಂಡಿಯಲ್ಲೆ ಆರಂಭಿಸುತ್ತಿದ್ದೇವೆ ಎಂದು ಹೇಳಿದರು.
೨೦೦೯ರಲ್ಲಿ ಎಸ್.ಆರ್.ಪಾಟೀಲ ಪ್ರತಿಷ್ಠಾನ ಆರಂಭವಾಗಿದ್ದು, ಈ ಒಂದುವರೆ ದಶಕದಲ್ಲಿ ನಮ್ಮ ಸಂಸ್ಥೆ ಎಂಬಿಬಿಎಸ್ ವರೆಗೂ ಬಂದು ತಲುಪಿದೆ. ಮುಂದಿನ ವರ್ಷ ಪಿಜಿ ಆರಂಭಿಸಲು ಎಲ್ಲ ಸಿದ್ದತೆ ಮಾಡಿಕೊಳ್ಳುತ್ತೇವೆ ಎಂದು ಇದೇ ವೇಳೆ ತಿಳಿಸಿದರು.
ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದ ಅಡಿಯಲ್ಲಿ ಮೆಡಿಕಲ್ ಕಾಲೇಜ್ ಆರಂಭಕ್ಕೆ ಸಹಕಾರ ನೀಡಿದ ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ, ರಾಜೀವಗಾಂ ಆರೋಗ್ಯ ವಿಶ್ವವಿದ್ಯಾಲಯ ಹಾಗೂ ಕೇಂದ್ರ ಸರ್ಕಾರಕ್ಕೂ ಕೃತಜ್ಞತೆ ಸಲ್ಲಿಸುತ್ತೇನೆ. ಜುಲೈ ೩೧ ರಂದು ನಡೆಯುವ ಉದ್ಘಾಟನೆ ಸಮಾರಂಭಕ್ಕೆ ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ರಾಜ್ಯ ಮತ್ತು ಕೇಂದ್ರದ ನಾಯಕರನ್ನು ಆವ್ಹಾನಿಸಲಿದ್ದೇವೆ ಎಂದರು.
೨೦೨೩ರ ಆಗಸ್ಟ್ ೧ ರಿಂದ ಬಾಡಗಂಡಿ ಗ್ರಾಮದ ಎಸ್.ಆರ್.ಪಾಟೀಲ ವೈದ್ಯಕೀಯ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ, ಚಿಕಿತ್ಸೆ, ಶಸöಚಿಕಿತ್ಸೆ, ಎಲ್ಲ ಪರೀಕ್ಷೆಗಳನ್ನು ಉಚಿತವಾಗಿ ಮಾಡುತ್ತ ಬರಲಾಗಿದೆ. ಈ ವರೆಗೂ ಒಟ್ಟು ೭ ಕೋಟಿ ರೂ. ಮೆಡಿಸನ್ ಗಳನ್ನು ಸಹ ಉಚಿತವಾಗಿ ಕೊಟ್ಟಿದ್ದೇವೆ. ೬೦೦ ಹಾಸಿಗೆಯ ಆಸ್ಪತ್ರೆಯಲ್ಲಿ ಈ ವರೆಗೂ ಉಚಿತವಾಗಿ ೩೪೪೪೦೦ ಒಪಿಡಿ, ೨೦೬೩೦೫ ಐಪಿಡಿ ಹಾಗೂ ೩೦೧೫ ಶಸöಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗಿದೆ. ಇದೀಗ ನಮ್ಮ ಆಸ್ಪತ್ರೆಗೆ ಆಯುಷ್ಮಾನ ಭಾರತ ಅಡಿಯಲ್ಲಿ ಚಿಕಿತ್ಸೆಗೂ ಅನುಮತಿ ಸಿಕ್ಕಿದೆ ಎಂದು ವಿವರಿಸಿದರು.