ಜಿಲ್ಲೆ

ಜು.8ರಂದು ರಾಷ್ಟ್ರೀಯ ಲೋಕ ಅದಾಲತ್: ನ್ಯಾ. ಟಿ.ಎನ್. ಇನವಳ್ಳಿ

    ಹಾಸನ: ರಾಷ್ಟ್ರೀಯ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜು.8ರಂದು ಏಕಕಾಲದಲ್ಲಿ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಎನ್. ಇನವಳ್ಳಿ ತಿಳಿಸಿದರು.

ಸದರಿ ಲೋಕ ಅದಾಲತ್‌ನಲ್ಲಿ ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಬ್ಯಾಂಕ್ ಹಣ ವಸೂಲಾತಿ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರದ ಪ್ರಕರಣಗಳು, ಕಾರ್ಮಿಕ ವಿವಾದಗಳು, ಕೌಟುಂಬಿಕ ಪ್ರಕರಣಗಳು, ರಾಜಿಯಾಗಬಲ್ಲ ಸಿವಿಲ್ ಪ್ರಕರಣಗಳು, ಭೂ ಸ್ವಾಧೀನ ಪ್ರಕರಣಗಳು, ಜನನ ನೋಂದಣಿ ಪ್ರಕರಣಗಳು ಹಾಗೂ ಲಘು ಕ್ರಿಮಿನಲ್ ಪ್ರಕರಣಗಳು, ವ್ಯಾಜ್ಯಪೂರ್ವ ಬ್ಯಾಂಕ್ ಸಾಲ ಮರುಪಾವತಿ, ನೀರಿನ ಕರ ವಸೂಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವಿದೆ. ಎಲ್ಲಾ ನ್ಯಾಯಾಲಯಗಳಲ್ಲಿಯೂ ಪ್ರತಿದಿನ ಪೂರ್ವ ಸಂಧಾನ ಪ್ರಕ್ರಿಯೆಯು ನಡೆಯಲಿದ್ದು ಕಕ್ಷಿದಾರರು ನೇರವಾಗಿ ಅಥವಾ ವಕೀಲರ ಮೂಲಕ ಸದರಿ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಮಂಗಳವಾರ ನ್ಯಾಯಾಲಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡ ಸಿವಿಲ್ ಪ್ರಕರಣಗಳಲ್ಲಿ ನ್ಯಾಯಾಲಯ ಶುಲ್ಕವು ಮರುಪಾವತಿಯಾಗಲಿದೆ. ಮೇಲ್ಮನವಿಗೆ ಅವಕಾಶ ಇರುವುದಿಲ್ಲ. ಸಮಯ ಹಾಗೂ ಹಣವು ಉಳಿತಾಯವಾಗಲಿದ್ದು ಉಭಯ ಕಕ್ಷಿದಾರರಿಬ್ಬರಿಗೂ ಉಪಯೋಗವಾಗಲಿದ್ದು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ.ರವಿಕಾಂತ ಅವರು ಮಾನತನಾಡಿ, ವಿಡಿಯೋ ಕಾನ್ಫರೆನ್ಸ್ ಮೂಲಕವೂ ಲೋಕ ಅದಾಲತ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಉಭಯ ಕಕ್ಷಿದಾರರ ಸಮ್ಮತಿಯ ಮೇರೆಗೆ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.