ಜಿಲ್ಲೆ

ಜು.6ರಂದು ನಗರಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಬೇಟಿ

ಹಾಸನ: ಇದೇ ತಿಂಗಳ 6ರ ಶನಿವಾರದಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ನಿರ್ದೇಶಕ ಡಾ.ಎಸ್.ವಿ. ಸಂತೋಷ್ ತಿಳಿಸಿದರು.
ಹಿಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಮ್ಸ್‌ನಲ್ಲಿ 2024-25ನೇ ಸಾಲಿಗೆ 150 ಎಂಬಿಬಿಎಸ್ ಸೀಟ್ ಪ್ರವೇಶಕ್ಕೆ ನ್ಯಾಷನಲ್ ಮೆಡಿಕಲ್ ಕೌನ್ಸಿಲ್(ಎನ್‌ಎಂಸಿ) ಅನುಮತಿ ನೀಡಿದೆ. ಹಿಮ್ಸ್‌ನ ಎಂಬಿಬಿಎಸ್‌ನಲ್ಲಿ ಮೂವರು ರ‌್ಯಾಂಕ್ ಪಡೆದುಕೊಂಡಿದ್ದಾರೆ. ಪಿಜಿಯಲ್ಲಿ 6 ಜನ ರ‌್ಯಾಂಕ್ ಪಡೆದಿದ್ದಾರೆ ಎಂದು ವಿವರಿಸಿದರು.
ಮಾ.1 ರಿಂದ ಕಾರ್ಯಾರಂಭ ಮಾಡಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಎಲ್ಲಾ ವಿಭಾಗಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು. ಯಂತ್ರಚಾಲಿತ ಲ್ಯಾಬ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ನೆಲ ಅಂತಸ್ತಿನಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ ಆರಂಭಿಸಲಾಗಿದ್ದು, ಅಲ್ಲಿಯೇ ಎಲ್ಲಾ ತುರ್ತು ಚಿಕಿತ್ಸೆ ಸಿಗಲಿದೆ. ಹಾಗೆಯೇ 32 ಕ್ವಾಟ್ರಸ್ ಇರುವ ನಸಿರ್ಂಗ್ ಕಟ್ಟಡವನ್ನು ಬಳಕೆಗೆ ನೀಡಲಾಗಿದೆ. ಹಿಮ್ಸ್ 750 ಹಾಸಿಗೆಗಳ ಸಾಮರ್ಥ್ಯವನ್ನು ಇದೀಗ 1200ಕ್ಕೆ ಹೆಚ್ಚಳ ಮಾಡಲಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಅನೇಕ ವಿಭಾಗಗಳಲ್ಲಿ ಸಿಬ್ಬಂದಿ ಕೊರತೆ ಇರುವ ಬಗ್ಗೆ ಜನರ ಗಮನಕ್ಕೆ ತರಲಾಗಿದೆ ಎಂದರು.
ಹಿಮ್ಸ್‌ನಲ್ಲಿ ದಾಖಲಾಗುವ ಎಲ್ಲಾ ರೋಗಿಗಳಿಗೆ ಗಂಜಿ ನೀಡಲು ಸೂಚನೆ ನೀಡಲಾಗಿದೆ. ಈವರೆಗೆ ನೀಡುತ್ತಿದ್ದ ಒಂದು ಮೊಟ್ಟೆಯ ಬದಲಿಗೆ ಎರಡು ಮೊಟ್ಟೆ ನೀಡಲಾಗುತ್ತಿದೆ. ಎಬಿಆರ್‌ಕೆಯಲ್ಲಿ ನಾವು ಮೂರನೇ ಸ್ಥಾನದಲ್ಲಿದ್ದೇವೆ. ಮುಂದೆ ದಿನದ 24ಗಂಟೆಯೂ ರನ್ ಮಾಡಲು ಬೇಕಾದ ಕ್ರಮ ಕೈಗೊಳ್ಳಲಾಗುತ್ತಿದೆ. ಔಷಧಿ ಸಮಸ್ಯೆ ಸಂಬಂಧ ಈಗಾಗಲೇ ಸಭೆ ನಡೆಸಲಾಗಿದ್ದು, ಶೀಘ್ರವೇ ಅಗತ್ಯ ಔಷಧ ದಾಸ್ತಾನು ಆಗಲಿದೆ ಎಂದು ತಿಳಿಸಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮೊದಲ ಹಂತದ ಕಟ್ಟಡ 59 ಕೋಟಿ ರೂ. ವೆಚ್ಚದಲ್ಲಿ ಕೆಲಸ ಮುಗಿದಿದೆ. ಅಗತ್ಯ ಸೇವೆ ಹಾಗೂ ಉಪಕರಣ ಖರೀದಿದೆ ತುರ್ತಾಗಿ 39 ಕೋಟಿ ರೂ. ಬೇಕಿದ್ದು, ಸರ್ಕಾರದಿಂದ ಕೊಡಿಸುವಂತೆ ಸಂಸದರು, ಶಾಸಕರಿಗೆ ಮನವಿ ಮಾಡಲಾಗಿದೆ. ಜತೆಗೆ ಹೊಸ ಆಸ್ಪತ್ರೆಗೆ ಬೇಕಾದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕ ಮತ್ತವರ ಸಂಬಳಕ್ಕೆ 35 ಕೋಟಿ ರೂ. ಬೇಕಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೊದಲಿಗೆ ಹೃದಯ ಹಾಗೂ ಮೆದುಳು ಸಂಬಂಧಿ ಕಾಯಿಲೆಗೆ ಚಿಕಿತ್ಸೆ ನೀಡುವುದರ ಜೊತೆಗೆ ಒಟ್ಟು 10 ವಿಭಾಗ ಆರಂಭ ಆಗಬೇಕಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಒಟ್ಟು ಮೂರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ 182 ಕೋಟಿ ವೆಚ್ಚದ ಯೋಜನೆ ತಯಾರಿಸಲಾಗಿದೆ. ಮುಂದೆ 2 ಅಂತಸ್ತಿನ ಕಟ್ಟಡ ಆಗಬೇಕಿದೆ. ಹಿಮ್ಸ್ ಆವರಣದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಇದೇ ವೇಳೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ರಾಘವೇಂದ್ರ ಪ್ರಸಾದ್, ಡಾ.ಪ್ರವೀಣ್, ಡಾ.ಮಂಜುನಾಥ್, ಡಾ.ಶಿವಸ್ವಾಮಿ ಮೊದಲಾದವರಿದ್ದರು.