ಶುಕ್ರವಾರ ಬಿಡುಗಡೆಯಾಗಲಿರುವ ಅಪರೂಪ ಸಿನಿಮಾ ಸಂಬಂಧ ಚಿತ್ರದ ನಿರ್ದೇಶಕ ಮಹೇಶ್ ಬಾಬು, ನಟ ಸುಘೋಶ್, ನಾಯಕ ನಟಿ ಹೃತಿಕಾ ಶ್ರೀನಿವಾಸ್ ಅವರು ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. 
ಜಿಲ್ಲೆ

ಜು.14ರಂದು ‘ಅಪರೂಪ’ ಸಿನಿಮಾ ಬಿಡುಗಡೆ

ಹಾಸನ: ಸುಗ್ಗಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ‘ಅಪರೂಪ’ ಚಿತ್ರವು ಜು.14ರ ಶುಕ್ರವಾರದಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಹಾಸನದ ಎಸ್‌ಬಿಜಿ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಸಿನಿಮಾದ ನಿರ್ದೇಶಕ ಮಹೇಶ್ ಬಾಬು ತಿಳಿಸಿದರು.

ಇಂದಿನ ಯುವಜನತೆಯ ಅಭಿರುಚಿಗೆ ತಕ್ಕಂತಹ ಕತೆ ಇದೆ. ಪ್ರಸ್ತುತ ಕಾಲಘಟ್ಟದ ಯುವಕರ ಜೀವನದಲ್ಲಿನ ಪ್ರೀತಿ, ಪ್ರೇಮ, ಅವರ ನಡುವೆ ನಡೆಯುವ ಅಹಂ ಸಂಘರ್ಷಗಳನ್ನು ಆಧರಿಸಿ ಚಿತ್ರಕತೆ ಹೆಣೆಯಲಾಗಿದೆ. ನನ್ನ ಆಕಾಶ್, ಅರಸು ರೀತಿಯಲ್ಲಿ ಇದೂ ಕುಟುಂಬಸಮೇತ ಕೂತು ನೋಡಬಹುದಾದ ಚಿತ್ರ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಚಿತ್ರದಲ್ಲಿ ನಾಯಕ-ನಾಯಕಿ ನಡುವೆ ಅವರ ಅಹಂಕಾರವೇ ವಿಲನ್ ಆಗಿರುತ್ತದೆ. ಸುಂದರವಾದ ಹೊರಾಂಗಣದಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಅಪರೂಪ ಚಿತ್ರದ ಗುಣಮಟ್ಟ ಎಲ್ಲರ ಮನ ಗೆಲ್ಲುವ ವಿಶ್ವಾಸವಿದೆ. ಚಿತ್ರದಲ್ಲಿ ಯಾವುದೇ ನೆಗೆಟಿವ್ ಶೆಡ್ ತೋರಿಸದೆ ಪ್ರೀತಿಯಾಧಾರಿತ ಅಂಶ ಹೊಂದಿರುವ ಚಿತ್ರ ಇದಾಗಿದ್ದು, ಯುವಜನರ ಕಣ್ಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.

ನಾಯಕ ನಟ ಸುಘೋಶ್ ಮಾತನಾಡಿ, ಚಿತ್ರದ ಹಾಡುಗಳು, ಟ್ರೈಲರ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ಕನ್ನಡಾಭಿಮಾನಿಗಳು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ, ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ನಾಯಕ ನಟಿ ಹೃತಿಕಾ ಶ್ರೀನಿವಾಸ್ ಉಪಸ್ಥಿತರಿದ್ದರು.