ಜಿಲ್ಲೆ

ಜು.13ರಂದು ತುರ್ತು ಪರಿಸ್ಥಿತಿ 50 ವರ್ಷಗಳ ನೆನಪು ಕಾರ್ಯಕ್ರಮ; ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಹೇಳಿಕೆ

ಹಾಸನ: ದೇಶದ ಮೇಲೆ ತುರ್ತು ಪರಿಸ್ಥಿತಿ ಏರಿ ಇಲ್ಲಿಗೆ 50 ವರ್ಷಗಳು ಕಳೆದಿದ್ದು, ಪ್ರಜಾಪ್ರಭುತ್ವ ಉಳಿಯಬೇಕಾದರೇ ಚಳವಳಿಗಳು ಜೀವಂತ ಇರಬೇಕು. ಹೋರಾಟ ಮಾಡಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜುಲೈ 13ರಂದು ಸಕಲೇಶಪುರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ತಿಳಿಸಿದರು.

ಜುಲೈ 13 ರಂದು ನಡೆಯುವ ಕಾರ್ಯಕ್ರಮದಲ್ಲಿ ಹಿಂದೆ ಹೋರಾಟ ಮಾಡಿದ ಹೋರಾಟಗಾರರನ್ನು ಆಹ್ವಾನಿಸಿ ಗೌರವಿಸಲಾಗುತ್ತದೆ. ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಮತ್ತು ಸಮಾಜವಾದಿ ಪಕ್ಷದ ರಾಜ್ ನಾರಾಯಣ್ ನಡುವೆ ಇದ್ದ ಚುನಾವಣೆಯ ತಕರಾರು ಅರ್ಜಿಯನ್ನು ವಿಚಾರಣೆ ನಡೆಸಿ ಚುನಾವಣೆಯಲ್ಲಿ ಇಂದಿರಾಗಾಂಧಿ ಅವರು ಅಕ್ರಮ ಎಸಗಿದ್ದಾರೆಂದು ನ್ಯಾಯಾಲಯ ತೀರ್ಪು ನೀಡಿತು. ಇದರಿಂದ ಅವರ ಲೋಕಸಭಾ ಸದಸ್ಯತ್ವ ರದ್ದು ಮಾಡಿದರು. ಇದರ ಪರಿಣಾಮ ಇಂದಿರಾ ಗಾಂಧಿ ತಮ್ಮ ಪ್ರಧಾನಮಂತ್ರಿ ಸ್ಥಾನವನ್ನು ಬಿಡುವುದು ಅನಿವಾರ್ಯವಾಗಿತ್ತು. ಆಗ ತಮ್ಮ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಯಪ್ರಕಾಶ್ ನಾರಾಯಣ, ವಾಜಿಪೇಯಿ, ಅಡ್ವಾಣಿ ಮುಂತಾದವರು ಸೇರಿಕೊಂಡಂತೆ ನೂರಾರು ಜನ ನಾಯಕರನ್ನು ಬಂಧಿಸಿ ಜೈಲಿಗಟ್ಟಿದರು. ಪತ್ರಿಕಾ ಸ್ವಾತಂತ್ರ್ಯವನ್ನು ರದ್ದು ಮಾಡಿದರು. ಜನರ ಸಪ್ತ ಸ್ವಾತಂತ್ರ್ಯ ಮೂಲಭೂತ ಹಕ್ಕನ್ನು ರದ್ದು ಮಾಡಿದರು. ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಯವರ ಅಧಿಕಾರವನ್ನು ಪ್ರಶ್ನೆ ಮಾಡದಂತೆ ಸಂವಿಧಾನಕ್ಕೆ ತಿದ್ದುಪಡಿ ತಂದರು. ದೇಶದ ಸರ್ವಾಧಿಕಾರವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡರು. ರಾಷ್ಟ್ರೀಯ ಸ್ವಯಂಸೇವಕ ಸಂಘ, ಜಮಾಯಿತ್ ಇಸ್ಲಾಂ ಈ ತರದ ಅನೇಕ ಸಂಘ ಸಂಸ್ಥೆಯವರ ಮೇಲೆ ನಿರ್ಬಂಧ ಹೇರಿ ನಾಯಕರನ್ನು ಬಂಧಿಸಿದರು. 19 ತಿಂಗಳು ಭಾರತ ಒಂದು ಬಂಧೀಖಾನೆಯಾಯಿತು. ನೂರಾರು ಜನ ಇವರ ಆಡಳಿತದ ದೌರ್ಜನ್ಯದಲ್ಲಿ ಪ್ರಾಣ ಕಳೆದುಕೊಂಡರು ಎಂದು ಹೇಳಿದರು.

ಇದು ತುರ್ತು ಪರಿಸ್ಥಿತಿಯ ಐವತ್ತು ವರ್ಷದ ಅನುಭವದ ಮಾತು. ಚಳವಳಿಗಳು ಸತ್ತರೆ ಪ್ರಜಾಪ್ರಭುತ್ವದ ಸಾವಾಗುತ್ತದೆ. ಯುವಜನಕ್ಕೆ ಹಿರಿಯ ನಾಗರಿಕರಿಗೆ ಪ್ರಜಾಪ್ರಭುತ್ವ ಉಳಿಸಲು, ಭ್ರಷ್ಟಾಚಾರ, ಜಾತಿ ರಾಜಕಾರಣ, ಮತೀಯ ರಾಜಕಾರಣ, ವಂಶಪಾರಂಪರಿಕ ರಾಜಕಾರಣದ ವಿರುದ್ಧ ಹೋರಾಟ ಮಾಡುವ ಅವಶ್ಯಕತೆ ಮತ್ತು ಅನಿವಾರ್ಯತೆ ಇಂದು ಇದೆ ಎಂದು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಅರ್‌ಎಸ್‌ಎಸ್ ಕಾರ್ಯಕರ್ತ ಸತ್ಯನಾರಾಯಣ ಗುಪ್ತ, ಕೆ.ಟಿ. ರೇಣುಕಾನಂದ, ಸನಾತನ ಸೇವಾ ಟ್ರಸ್ಟ್ ನ ಲೋಹಿತ್, ಬಂಜಾರ್ ಶೇಖರ್, ರುದ್ರೇಶ್ ಇತರರು ಉಪಸ್ಥಿತರಿದ್ದರು.