ಚಿಕ್ಕಬಳ್ಳಾಪುರ: ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ಅವಕಾಶಗಳು ಸಿಗಬೇಕು. ಹಾಗೆಯೇ ಸೋಲು-ಗೆಲುವು ಬದಿಗೊತ್ತಿ ಉತ್ಸಾಹದಿಂದ ಭಾಗವಹಿಸುವಂತಹ ಕ್ರಿಯಾಶೀಲ ಗುಣವನ್ನು ಮಕ್ಕಳಲ್ಲಿ ಬೆಳೆಸುವ ಅಗತ್ಯವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ ಅಭಿಪ್ರಾಯಪಟ್ಟರು.
ನಗರದ ನಂದಿ ರಂಗಮಂದಿರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಭಾನುವಾರ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಕಸಾಪ ತಾಲೂಕು ಘಟಕದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪರಿಸರ ದಿನದ ಚಿತ್ರ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ಚಿಕ್ಕ ವಯಸ್ಸಿನಿಂದಲೇ ಓದಿನ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಮಗು ಪ್ರತಿಭೆ ಪ್ರದರ್ಶಿಸಬೇಕು. ಇದಕ್ಕೆ ಪ್ರೋತ್ಸಾಹದ ಕೊರತೆ ಬಾಧಿಸಬಾರದು. ಪೈಪೋಟಿ ಯುಗದಲ್ಲಿ ಕ್ರಿಯಾಶೀಲ ಮಕ್ಕಳು ವಿಶೇಷ ಸಾಧನೆ ಮೂಲಕ ಗಮನ ಸೆಳೆದು ಮಂತ್ರ ಮುಗ್ಧರನ್ನಾಗಿಸುತ್ತಿದ್ದಾರೆ. ಇದಕ್ಕೆ ಪಾಲಕರು ಮತ್ತು ಶಿಕ್ಷಕರ ಹೆಚ್ಚಿನ ಬೆಂಬಲವೂ ಸಿಗಬೇಕು ಎಂದರು.
ಪರಿಸರವು ಇಡೀ ಜೀವಸಂಕುಲದ ಜೀವಾಳ. ಆದರೆ, ಇದನ್ನು ಅಭಿವೃದ್ಧಿಯ ಜತೆಗೆ ನಾನಾ ಹೆಸರಿನಲ್ಲಿ ಮನುಷ್ಯ ಹಾಳುಗೆಡುವುದರೊಂದಿಗೆ ಎಲ್ಲರನ್ನೂ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾನೆ. ಇದಕ್ಕೆ ಈಗಲಾದರೂ ಹಸಿರು ಸಂಪತ್ತು, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರಮುಖ ಆದ್ಯತೆ ನೀಡಬೇಕು. ಮಾರಕ ಚಟುವಟಿಕೆಗೆ ಕಡಿವಾಣ ಹಾಕಬೇಕು ಎಂದರು.
ಪರಿಸರ ದಿನಾಚರಣೆ ಅಂಗವಾಗಿ ವಿವಿಧ ಪರಿಕಲ್ಪನೆಗಳೊಂದಿಗೆ ಮಕ್ಕಳಿಗೆ ಚಿತ್ರ ಬರೆಸುವ ಕಾರ್ಯಕ್ರಮ ಕೈಗೊಂಡಿರುವುದು ಶ್ಲಾಘನೀಯ. ಯಾವುದೇ ಸ್ಪರ್ಧೆಗಳಲ್ಲಿ ಭಾಗಿಯಾಗುವುದು ಮುಖ್ಯ. ಸಾಮಾನ್ಯವಾಗಿ ಉತ್ತಮವಾಗಿ ಬರೆದರೂ ಬಹುಮಾನಕ್ಕೆ ಅಂತಿಮವಾಗಿ ಎಲ್ಲರೂ ಆಯ್ಕೆಯಾಗುವುದಿಲ್ಲ. ಕೆಲ ಅತ್ಯುತ್ತಮ ಅಂಶಗಳಿಂದ ನಿರ್ದಿಷ್ಟ ಸಂಖ್ಯೆಯಲ್ಲಿ ವಿಜೇರಾಗುತ್ತಾರೆ. ಇದರಿಂದ ಸೋಲಿನ ಹತಾಶೆ ಸಹಜ. ಮತ್ತಷ್ಟು ಉತ್ಸಾಹದೊಂದಿಗೆ ಇತರ ಸ್ಪರ್ಧೆಗಳನ್ನು ಎದುರಿಸಬೇಕು. ಹಾಗೆಯೇ ಗೆದ್ದವರು ಮತ್ತಷ್ಟು ಗೆಲುವಿನ ಬೇಟೆಯಾಡಬೇಕು ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಜಯರಾಮ್ ಮಾತನಾಡಿ, ಚಿತ್ರ ಬರೆಯುವ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸುವಿಕೆ, ಪಾಲಕರು ಕೆಲಸದ ಒತ್ತಡದ ನಡುವೆಯೂ ಸ್ಪರ್ಧೆಯ ಅವಕಾಶ ವಂಚಿತರನ್ನಾಗಿಸದಿರಲು ಮಕ್ಕಳನ್ನು ಕರೆದುಕೊಂಡು ಬಂದಿರುವುದು ಖುಷಿಯ ವಿಚಾರ. ಇಂತಹ ಉತ್ಸಾಹದಾಯಿ ಕಾರ್ಯಕ್ರಮಗಳು ಹೊಸ ಪ್ರತಿಭಾವಂತರನ್ನು ಬೆಳಕಿಗೆ ತರಲು ಸಹಕಾರಿ ಎಂದು ತಿಳಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಎನ್.ಸೊಣ್ಣೇಗೌಡ ಮಾತನಾಡಿ, ಮಕ್ಕಳಲ್ಲಿ ಪರಿಸರ, ನಾಡು-ನುಡಿ, ಸಾಹಿತ್ಯ ಅಭಿಮಾನ, ಸಾಮಾಜಿಕ ಕಾಳಜಿ ಮನೋಭಾವ ಬೆಳೆಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕಾಗಿದೆ ಎಂದರು. ಸಮಾಜದ ಆಗು-ಹೋಗುಗಳ ಬಗ್ಗೆ ಗಮನ ಸೆಳೆಯುತ್ತ, ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಜಯವಾಣಿ ಮತ್ತು ದಿಗ್ವಿಜಯ ಚಾನೆಲ್ ನಿರಂತರವಾಗಿ ಸಾಮಾಜಿಕ ಸೇವಾ ಮತ್ತು ಕ್ರಿಯಾಶೀಲ ಚಟುವಟಿಕೆ ಕೈಗೊಳ್ಳುವ ಮೂಲಕ ವಿಶೇಷತೆ ಬದ್ಧತೆ ಪ್ರದರ್ಶಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು. ವಿಜಯವಾಣಿ ಜಿಲ್ಲಾ ವರದಿಗಾರ ಎನ್.ವೆಂಕಟೇಶ್, ಪ್ರಸಾರಾಂಗ ಕಾರ್ಯನಿರ್ವಾಹಕ ಬಸಣ್ಣ, ತೆರಿಗೆ ಸಲಹೆಗಾರ ಎಂ.ಮುನಿರಾಮ್, ಮುಖಂಡರಾದ ಎಂ.ಮುನಿರಾಜು ಮತ್ತಿತರರು ಇದ್ದರು.
ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವ ಸ್ಪರ್ಧಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಇದರಿಂದ ಪರಸ್ಪರ ಪೈಪೋಟಿ ಹೆಚ್ಚಾಗಿ, ಹಲವರು ಸಾಧಕರಾಗಿ ಹೊರ ಹೊಮ್ಮಲು ಸಹಕಾರಿಯಾಗುತ್ತದೆ. ವಿಜಯವಾಣಿ ಮತ್ತು ದಿಗ್ವಿಜಯ ಚಾನೆಲ್ ಪರಿಸರ ದಿನದ ಅಂಗವಾಗಿ ಚಿತ್ರ ಬರೆಯುವ ಸ್ಪರ್ಧೆಯ ಮೂಲಕ ಮಕ್ಕಳಿಗೆ ಒಳ್ಳೆಯ ವೇದಿಕೆ ಒದಗಿಸಿಕೊಟ್ಟಿರುವುದು ಖುಷಿಯ ವಿಚಾರ. ಮಹಾಂತೇಶ್, ಶಿಕ್ಷಕ, ಚಿಕ್ಕಬಳ್ಳಾಪುರ ========= ಮಕ್ಕಳು ವಿಶಿಷ್ಟ ಕಲೆ ಪ್ರದರ್ಶಿಸಲು ಒಳ್ಳೆಯ ಅವಕಾಶ ನೀಡುವುದಕ್ಕೆ ಪೂರಕವಾದ ವಿಶಿಷ್ಟ ಕಾರ್ಯಕ್ರಮಗಳು ಹೆಚ್ಚಿನ ಸಹಭಾಗಿತ್ವದೊಂದಿಗೆ ಯಶಸ್ವಿಯಾಗುತ್ತದೆ. ಇದಕ್ಕೆ ಪರಿಸರದ ದಿನದ ಅಂಗವಾಗಿ ಕೈಗೊಂಡಿರುವ ಚಿತ್ರ ಬರೆಯುವ ಮಕ್ಕಳ ಸ್ಪರ್ಧೆ ಒಂದು ನಿದರ್ಶನ. ಬಿ.ಪಿ.ಲೋಕೇಶ್, ಶಿಕ್ಷಕ, ಚಿಕ್ಕಬಳ್ಳಾಪುರ ******* ವಿವಿಧ ಸ್ಪರ್ಧೆಗಳಲ್ಲಿ ನಮ್ಮ ಮಗು ನಿರಂತರವಾಗಿ ಉತ್ಸಾಹದಿಂದ ಭಾಗಹಿಸುವಿಕೆ, ಬಹುಮಾನ ಗೆಲ್ಲುವಿಕೆಯು ಖುಷಿಯ ವಿಚಾರ. ಈ ಒಳ್ಳೆಯ ಸ್ಪರ್ಧಾ ಕಾರ್ಯಕ್ರಮದ ರೂವಾರಿ ವಿಜಯವಾಣಿ ಮತ್ತು ದಿಗ್ವಿಜಯ ಚಾನೆಲ್‌ಗೆ ಧನ್ಯವಾದಗಳು. ಕೆ.ಎಸ್.ಸ್ವಪ್ನಾ, ಸ್ಪರ್ಧಾಳು ಪಾಲಕಿ, ಚಿಕ್ಕಬಳ್ಳಾಪುರ ****** ಚಿತ್ರ ಬರೆಯುವಿಕೆಯ ಮಕ್ಕಳ ಸ್ಪರ್ಧೆಯ ಮೂಲಕ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಒಳ್ಳೆಯ ಪ್ರಯತ್ನ ಶ್ಲಾಘನೀಯ. ರೆಡ್ಡಪ್ಪ, ಸ್ಪರ್ಧಾಳು ಪಾಲಕ, ಚಿಕ್ಕಬಳ್ಳಾಪುರ
ಬರೋಬ್ಬರಿ 429 ಮಕ್ಕಳು ಭಾಗಿ, ಚಿತ್ರ ಸ್ಪರ್ಧೆ ಯಶಸ್ವಿ: ನಗರದ ನಂದಿ ರಂಗ ಮಂದಿರ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರ ದಿನದ ಚಿತ್ರ ಬರೆಯುವ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು. ಜಿಲ್ಲೆಯ ವಿವಿಧೆಡೆಯಿಂದ 429 ವಿದ್ಯಾರ್ಥಿಗಳು ಚಿತ್ರ ಬರೆದರು. 2ರಿಂದ 4ನೇ ತರಗತಿಯ ವಿದ್ಯಾರ್ಥಿಗಳು 68, 5ರಿಂದ 7ನೇ ತರಗತಿಯ ವಿದ್ಯಾರ್ಥಿಗಳು 130 ಮತ್ತು 8ರಿಂದ 9ನೇ ತರಗತಿಯ ಮಕ್ಕಳು 231 ಮಕ್ಕಳು ಹೆಸರು ನೋಂದಾಯಿಸಿಕೊಂಡು, ಚಿತ್ರಗಳನ್ನು ಬರೆದರು. ಪಾಲಕರು, ಶಿಕ್ಷಕರು ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಮೂರು ವಿಭಾಗದಲ್ಲಿ ಪ್ರಥಮ ಬಹುಮಾನ ತಲಾ 2 ಸಾವಿರ ಮೂವರು ಮಕ್ಕಳಿಗೆ, ದ್ವಿತೀಯ ಬಹುಮಾನ ತಲಾ 1500 ರೂ. ಮೂವರು ಮಕ್ಕಳಿಗೆ, ತೃತೀಯ ಬಹುಮಾನ ತಲಾ ಒಂದು ಸಾವಿರ ರೂ. ಮೂವರು ಮಕ್ಕಳಿಗೆ ನೀಡಲಾಯಿತು. ವಿಜೇತ ಮಕ್ಕಳಿಗೆ ಕನ್ನಡದ ನಿಘಂಟು ಮತ್ತು ಪುಸ್ತಕ ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ ಮಕ್ಕಳಿಗೂ ಪ್ರಶಂಸಾ ಪತ್ರ ನೀಡಲಾಯಿತು.
ಸ್ಪರ್ಧೆಯಲ್ಲಿ ವಿಜೇತರು: 2ರಿಂದ 4ನೇ ತರಗತಿ ವಿಭಾಗದಲ್ಲಿ ಪ್ರಥಮ: ಸಿ.ಸ್ಮೃತಿ( ಬಿಜಿಎಸ್ ವರ್ಲ್ಡ್ ಸ್ಕೂಲ್, ಸೂಲಾಲಾಪ್ಪ ದಿನ್ನೆ), ದ್ವಿತೀಯ: ರುತ್ವಿಕ್ ಎಂ.ಯಾದವ್ ( ಬಿಜಿಎಸ್ ಆಂಗ್ಲ ಶಾಲೆ, ಅಗಲಗುರ್ಕಿ), ತೃತೀಯ:ಪಿ.ಜಿ.ಸುಚಲ್(ನ್ಯೂಟನ್ ಗ್ರಾಮರ್ ಸ್ಕೂಲ್, ಚಿಕ್ಕಬಳ್ಳಾಪುರ), 5ರಿಂದ 7ನೇ ತರಗತಿ ವಿಭಾಗದಲ್ಲಿ ಪ್ರಥಮ: ಎ.ಎಂ.ಲೋಚನ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಗರೇಖನಹಳ್ಳಿ), ದ್ವಿತೀಯ: ಪಿ.ಎಸ್.ಮೋಕ್ಷಾ (ಕೆ.ವಿ.ಆಂಗ್ಲ ಶಾಲೆ, ಚಿಕ್ಕಬಳ್ಳಾಪುರ), ತೃತೀಯ: ಸೌರವ್ ಸಾಯಿ, ಅನಂತ ವಿದ್ಯಾನಿಕೇತನ) ಮತ್ತು 8ರಿಂದ 9 ನೇ ತರಗತಿ ವಿಭಾಗದಲ್ಲಿ ಪ್ರಥಮ: ಎಂ.ಪ್ರಣವಿ (ಬಿಜಿಎಸ್ ವರ್ಲ್ಡ್ ಸ್ಕೂಲ್, 8 ನೇ ತರಗತಿ), ದ್ವಿತೀಯ: ಪಿ.ಮೃಧುಲ ಸಾಯಿ( ಸಾಯಿರಾಮ್ ಇಂಟರ್ ನ್ಯಾಷ್‌ನಲ್ ಸ್ಕೂಲ್, 9ನೇ ತರಗತಿ), ತೃತೀಯ: ಮಲ್ಲಿಕಾ (9ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಅಂಗರೇಖನಹಳ್ಳಿ) ಬಹುಮಾನವನ್ನು ಪಡೆದರು.
ವಿಜೇತರ ಆಯ್ಕೆಯ ಸವಾಲು: ಚಿತ್ರಕಲಾ ಶಿಕ್ಷಕರಾದ ಮುದ್ದೇನಹಳ್ಳಿ ಸತ್ಯಸಾಯಿ ಸ್ಕೂಲ್‌ನ ಬಿ.ಪಿ.ಲೋಕೇಶ್, ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ನಾಗರಾಜ್, ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆಯ ಸಿ.ಎಲ್.ಸತೀಶ್, ಗಿಡ್ನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಎನ್.ಆರ್.ಸಂತೋಷ್, ಬಿಜಿಎಸ್ ಆಂಗ್ಲ ಶಾಲೆಯ ಶಿಕ್ಷಕ ರಾಕೇಶ್, ಗುಡಿಬಂಡೆಯ ಸರ್ಕಾರಿ ಪ್ರೌಢಶಾಲೆಯ ಸಿದ್ದೇಶ್, ದಿನ್ನೇಮೇಲಿನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎನ್.ಮಂಜುನಾಥ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಪ್ರತಿ ವಿಭಾಗದಲ್ಲಿ ಪರಿಸರ ವಿಚಾರವಾಗಿ ಆಯ್ದ ಕಲ್ಪನೆಯಲ್ಲಿ ಚಿತ್ರ, ಆಕರ್ಷಕ ಬಣ್ಣ, ನಾನಾ ಅಂಶಗಳನ್ನು ಪರಿಗಣಿಸಿ, ವಿಜೇತರನ್ನು ಆಯ್ಕೆ ಮಾಡಲಾಯಿತು. ಮಕ್ಕಳು ಪರಸ್ಪರ ಪೈಪೋಟಿಯಲ್ಲಿ ಚಿತ್ರ ಬರೆದಿದ್ದು, ವಿಜೇತರ ಆಯ್ಕೆಯ ಕಠಿಣ ಸವಾಲು ಎದುರಾಯಿತು. ಇದರ ನಡುವೆ ಪ್ರತಿ ವಿಭಾಗದಲ್ಲೂ ಮೊದಲು ಉತ್ತಮ 50, ಬಳಿಕ ಕ್ರಮವಾಗಿ 20, 10, 5 ಚಿತ್ರಗಳಲ್ಲಿ ತಲಾ ಮೂರನ್ನು ಆಯ್ಕೆ ಮಾಡಲಾಯಿತು.