ಸಿದ್ದಾಪುರ: ತಾಲೂಕಿನ ಮಾವಿನಗುಂಡಿ- ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕತ್ತಲೆಕಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಲ್ಲಿರುವ ಜೀವವೈವಿಧ್ಯ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಸಸ್ಯವಿಜ್ಞಾನಿ ಡಾ. ಸುಭಾಶ್ಚಂದ್ರನ್ ಹೇಳಿದರು.
ತಾಲೂಕಿನ ಮಾವಿನಗುಂಡಿ ಸಮೀಪದ ಕತ್ತಲೆಕಾನಿಗೆ ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರೊಂದಿಗೆ ಶುಕ್ರವಾರ ಭೇಟಿ ನೀಡಿ ಅವರು ಮಾತನಾಡಿದರು.
ಇಲ್ಲಿಯ ರಾಮಪತ್ರೆ ಶ್ರೇಷ್ಠವಾಗಿದೆ. ಪಶ್ಚಿಮಘಟ್ಟ ಪ್ರದೇಶ ಹಾಗೂ ಶರಾವತಿ ಕಣಿವೆಯಲ್ಲಿ ಅತ್ಯಮೂಲ್ಯವಾದ ಸಸ್ಯ ಸಂಕುಲಗಳಿವೆ. ಕಾಡು ಜಾಯಿಕಾಯಿ ಗಿಡ ಬೇರೆ ಎಲ್ಲೂ ಕಂಡುಬರುವುದಿಲ್ಲ. ಅದರಂತೆ ಸಿಂಗಳಿಕವೂ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಇತ್ತೀಚೆಗೆ ಕತ್ತಲೆಕಾನಿನಲ್ಲಿರುವ ಅನೇಕ ಸಸ್ಯ ಪ್ರಭೇದಗಳು ನಾಶವಾಗುತ್ತಿದ್ದು, ಅವುಗಳನ್ನು ಸಂರಕ್ಷಿಸಬೇಕಿದೆ ಎಂದರು.
ಅನಂತ ಹೆಗಡೆ ಅಶೀಸರ ಮಾತನಾಡಿ, ಕತ್ತಲೆಕಾನಿನ ಮಹತ್ವ ಅನೇಕರಿಗೆ ತಿಳಿದಿಲ್ಲ. ಮಾವಿನಗುಂಡಿ ಸಮೀಪ ಕತ್ತಲೆಕಾನು ಇರುವ ಬಗ್ಗೆ ಪ್ರಮುಖ ಸ್ಥಳಗಳಲ್ಲಿ ಫಲಕ ಅಳವಡಿಸಲು ಸ್ಥಳೀಯ ಆಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಗೆ ಸೂಚಿಸಲಾಗುವುದು. ಕತ್ತಲೆಕಾನು ಸೇರಿ ಸೂಕ್ಷ್ಮ ಪ್ರದೇಶಗಳ ರಕ್ಷಣೆಗೆ ಜೀವವೈವಿಧ್ಯ ಮಂಡಳಿ ಮುಂದಾಗಿದೆ ಎಂದರು.
ಜೀವವೈವಿಧ್ಯ ಮಂಡಳಿ ಸದಸ್ಯ ಡಾ. ಪ್ರಕಾಶ ಮೇಸ್ತ, ಪ್ರೊ. ಕುಮಾರಸ್ವಾಮಿ, ಶ್ರೀಪಾದ ಬಿ.ಎಸ್., ಡಾ. ಪ್ರೀತಮ್ ಎಸಿಎಫ್ ಅಜೀಜ್ ಶೇಖ್, ಆರ್ಎಫ್ಒ ಶಿವಾನಂದ ನಿಂಗಾಣಿ ಇದ್ದರು.
ಸತ್ಯಾಗ್ರಹ ಸ್ಮಾರಕ ಅಭಿವೃದ್ಧಿ
ತಾಲೂಕಿನ ಮುಖ್ಯ ಪ್ರವಾಸಿ ಕೇಂದ್ರವಾಗಿರುವ ಮಾವಿನಗುಂಡಿಯ ಮಹಿಳಾ ಸತ್ಯಾಗ್ರಹ ಸ್ಮಾರಕವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅನಂತ ಹೆಗಡೆ ಅಶೀಸರ ಭರವಸೆ ನೀಡಿದರು. ಮಾವಿನಗುಂಡಿಯ ಮಹಿಳಾ ಸತ್ಯಾಗ್ರಹ ಸ್ಮಾರಕಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. 2010-11ರಲ್ಲಿ ನಿರ್ವಣಗೊಂಡಿರುವ ಸ್ಮಾರಕ ಈಗ ಶಿಥಿಲಗೊಂಡಿದೆ. ಅಭಿವೃದ್ಧಿ ಕುರಿತು ಅರಣ್ಯ, ಕಂದಾಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಮುಖ್ಯಸ್ಥರೊಂದಿಗೆ ರ್ಚಚಿಸಲಾಗುವುದು ಎಂದರು.