ಚಾಮರಾಜನಗರ: ಜೀವವೈವಿಧ್ಯತೆ ಹಾಗೂ ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.
ಅರಣ್ಯ ಇಲಾಖೆಯ 68 ನೇ ವನ್ಯಜೀವಿ ದಿನಾಚರಣೆ ಅಂಗವಾಗಿ ಭಾನುವಾರ ಗುಂಡ್ಲುಪೇಟೆ ಪಟ್ಟಣದ ಜೆಎಸ್‌ಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆಯಲ್ಲಿ ದೊಡ್ಡ ಪಾತ್ರವಹಿಸುವ ವನ್ಯಜೀವಿಗಳ ರಕ್ಷಣೆ ಕೇವಲ ಅರಣ್ಯ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರೂ ಕೈಜೋಡಿಸಿದರೆ ಮಾತ್ರ ಕಾರ್ಯಕ್ರಮಕ್ಕೆ ಅರ್ಥಬರುತ್ತದೆ. ಇಡೀ ದೇಶದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಖ್ಯಾತಿಹೊಂದಿದೆ. ತನ್ನ ವಿವಿಧ ರೀತಿಯ ವನ್ಯಜೀವಿಗಳು ಹಾಗೂ ಜೀವವೈವಿದ್ಯತೆಯನ್ನು ಹೊಂದಿದೆ. ಆದ್ದರಿಂದ ಇವುಗಳ ಮಹತ್ವವನ್ನು ಅರಿತು ಅವುಗಳ ಉಳಿವಿಗೆ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದರು.
ಹುಲಿ ಯೋಜನೆಯ ನಿರ್ದೇಶಕ ಡಾ.ರಮೇಶ್ ಕುಮಾರ್ ಮಾತನಾಡಿ, ಕಳೆದ ಗಣತಿಯಲ್ಲಿ ಬಂಡೀಪುರದಲ್ಲಿ 170 ಕ್ಕೂ ಹೆಚ್ಚು ಹುಲಿಗಳು ಹಾಗೂ 3 ಸಾವಿರಕ್ಕೂ ಹೆಚ್ಚಿನ ಆನೆಗಳಿರುವುದು ಕಂಡುಬಂದಿದೆ. ಅವುಗಳ ರಕ್ಷಣೆ ಹಾಗೂ ಪೋಷಣೆಗೆ ಬೇಕಾದ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಂಡಿದ್ದು, ಈ ಬಗ್ಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವುಮೂಡಿಸಲಾಗುತ್ತಿದೆ. ಆದ್ದರಿಂದ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು. ಈ ಬಗ್ಗೆ ಅರಣ್ಯ ಇಲಾಖೆ ಸಾರ್ವಜನಿಕರ ಸಹಕಾರ ಪಡೆದುಕೊಳ್ಳಬೇಕು ಎಂದರು.
ಮೈಸೂರು ವಲಯದ ಸಿಸಿಎಫ್ ಡಾ.ಮಾಲತಿ ರಮೇಶ್ ಕುಮಾರ್, ತಹಸೀಲ್ದಾರ್ ರವಿಶಂಕರ್, ಕಾಲೇಜಿನ ಪ್ರಾಂಶುಪಾಲ ಮರಿಸ್ವಾಮಪ್ಪ, ಬಿಜೆಪಿ ಮಂಡಲಾಧ್ಯಕ್ಷ ದೊಡ್ಡಹುಂಡಿ ಜಗದೀಶ್ ಸೇರಿದಂತೆ ಹಲವರು ಇದ್ದರು.