ಕಡೂರಿನಲ್ಲಿ ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಅವರಿಗೆ ಕಸಾಪದಿಂದ ನುಡಿನಮನ ಸಲ್ಲಿಸಲಾಯಿತು. ಸೂರಿ ಶ್ರೀನಿವಾಸ್, ಪರಮೇಶ್, ಸಿದ್ದಪ್ಪ, ಪ್ರಕಾಶ್, ಲತಾ, ಸೀತಾಲಕ್ಷ್ಮೀ ಇತರರಿದ್ದರು.  
ಜಿಲ್ಲೆ

ಜೀವನಾನುಭವವನ್ನೇ ಕಾವ್ಯವಾಗಿಸಿದ ಎಚ್ಚೆಸ್ವಿ

ಕಡೂರು: ಕನ್ನಡ ಕಾವ್ಯಲೋಕದಲ್ಲಿ ಎಚ್.ಎಸ್.ವೆಂಕಟೇಶಮೂರ್ತಿ ಅವರ ಹೆಸರು ಚಿರಸ್ಥಾಯಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಶುಕ್ರವಾರ ನಡೆದ ಎಚ್ಚೆಸ್ವಿ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಭಾವಗೀತೆಗಳನ್ನು ನಮ್ಮ ನಿತ್ಯ ಜೀವನದ ಅನುಭವದಂತೆ ಬರೆದವರು ಎಚ್ಚೆಸ್ವಿ. 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾಡಿದ ವಿದ್ವತ್ಪೂರ್ಣ ಭಾಷಣ ಮರೆಯಲಾಗದು. ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ಪ್ರಶಸ್ತಿ ಅವರ ಮೂಲಕ ಬರುವ ನಿರೀಕ್ಷೆಯಿತ್ತು. ಎಚ್ಚೆಸ್ವಿ ನಿಧನ ಕನ್ನಡ ಕಾವ್ಯಲೋಕಕ್ಕೆ ಆದ ದೊಡ್ಡ ನಷ್ಟ ಎಂದರು.

ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಪ್ರಕಾಶ್ ಮಾತನಾಡಿ, ಎಚ್ಚೆಸ್ವಿ ನಮ್ಮ ನಡುವೆ ಇದ್ದು ಕನ್ನಡ ಸಾರಸ್ವತ ಲೋಕದಲ್ಲಿ ಅವರದೇ ಆದ ಛಾಪು ಮೂಡಿಸಿದ್ದಾರೆ. ಅವರ ಭಾವಗೀತೆಗಳ ಮೂಲಕ ನಮ್ಮೊಂದಿಗೆ ಸದಾ ಹಸಿರಾಗಿ ಉಳಿಯುತ್ತಾರೆ ಎಂದರು.

ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್ ಮಾತನಾಡಿ, ಎಚ್ಚೆಸ್ವಿ ಅವರ ಭಾವಗೀತೆಗಳು ಮನಸ್ಸಿಗೆ ತೀರ ಹತ್ತಿರವಾಗಿದ್ದವು. ಭಾವನೆ ತುಂಬಿ ಬರೆದು ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಪಡೆದ ಎಚ್ಚೆಸ್ವಿ ಕನ್ನಡ ನಾಡು ಮರೆಯಲಾಗದು ಎಂದು ಬಣ್ಣಿಸಿದರು.

ಕಸಾಪ ತಾಲೂಕು ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್, ಮಾಜಿ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಪ್ರಕಾಶ್ ನಾಯ್ಕ, ಬ್ಯಾಗಡೇಹಳ್ಳಿ ಬಸವರಾಜು, ಶಾಂತಮೂರ್ತಿ, ರವಿ, ಎಚ್.ಕೆ.ಮಂಜುನಾಥ್, ಎನ್.ಡಿ.ಸೀತಾಲಕ್ಷ್ಮೀ, ವಸಂತಕುಮಾರ್, ಕುಪ್ಪಾಳು ಶಾಂತಮೂರ್ತಿ, ಬಿ.ಟಿ.ಬಸವರಾಜ್, ಕಲ್ಲೇಶಪ್ಪ,ರವಿ ಇತರರಿದ್ದರು.