ಮೈಸೂರು: ರಾಷ್ಟ್ರೀಯ ಸೇವಾ ಯೋಜನೆಯ ಒಂದು ಶಿಬಿರದಲ್ಲಿ ಭಾಗವಹಿಸಿದರೆ ಇಡೀ ಜೀವನಕ್ಕಾಗುವಷ್ಟು ಅನುಭವ ನೀಡುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯ ಸಂಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಬಿ.ಎನ್.ಯಶೋದಾ ಹೇಳಿದರು.
ಮೈವಿವಿ ಸಂಜೆ ಕಾಲೇಜು ವತಿಯಿಂದ ಎಸ್.ಉತ್ತನಹಳ್ಳಿ ಬಳಿಯ ಮಾರಶೆಟ್ಟಹಳ್ಳಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಬಿರಾರ್ಥಿಗಳು ಗ್ರಾಮೀಣ ಪರಿಸರ, ಸಾಮಾಜಿಕ ವ್ಯವಸ್ಥೆ, ಸಂಬಂಧಗಳ ಬಗ್ಗೆ ತಿಳಿಯಬಹುದು. ಮಾನಸಿಕ, ದೈಹಿಕ ಬೆಳವಣಿಗೆಯ ಜತೆಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಕೂಡ ಆಗುತ್ತದೆ ಎಂದರು.
ಶಿಬಿರಾರ್ಥಿಗಳು ಗ್ರಾಮೀಣ ಜನರಿಗೆ ಸ್ಪಂದಿಸಿ ವ್ಯಕ್ತಿತ್ವ ರೂಪಿಸಿಕೊಳ್ಳುವುದರ ಜತೆಗೆ ನಿಮ್ಮಲ್ಲಿರುವ ಜ್ಞಾನ ಪಸರಿಸಿ. ಮೂಢನಂಬಿಕೆ ನಿವಾರಿಸುವ ಕೆಲಸ ಮಾಡಿ ಎಂದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಮೊದಲೆಲ್ಲಾ ಎನ್‌ಎಸ್‌ಎಸ್ ಶಿಬಿರ ಎಂದರೆ ಶ್ರಮದಾನ ಎಂಬ ಪರಿಸ್ಥಿತಿ ಇತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸ್ವಚ್ಛತೆ, ಜಲ ಸಂರಕ್ಷಣೆ, ಪರಿಸರ, ಮದ್ಯಪಾನ ಮತ್ತಿತರ ವಿಷಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜತೆಗೆ ರಾಷ್ಟ್ರೀಯತೆ, ಭಾವೈಕ್ಯತೆ, ಕೃಷಿ, ಉದ್ಯೋಗಾವಕಾಶಗಳು, ಜೀವನ ಕೌಶಲ ಮೊದಲಾದ ವಿಷಯ ತಿಳಿಸಿಕೊಡಲಾಗುತ್ತಿದೆ ಎಂದರು.
ವಿವಿ ಸಂಜೆ ಕಾಲೇಜಿನ ಇತಿಹಾಸ ವಿಭಾಗದ ಸಂಯೋಜಕ ಡಾ.ರಾಚಯ್ಯ ಮಾತನಾಡಿ, ಸಂಸ್ಕಾರ ಬೆಳೆಸಲು, ಸಂಸ್ಕೃತಿ ಬಗ್ಗೆ ತಿಳಿಯಲು ಎನ್‌ಎಸ್‌ಎಸ್ ಶಿಬಿರ ಸಹಕಾರಿ ಎಂದರು.
ಮೊಸಂಬಾಯನಹಳ್ಳಿ ಪಿಡಿಒ ಗೋಪಾಲಕೃಷ್ಣ, ಗ್ರಾಮ ಸಹಾಯಕ ಚಿಕ್ಕರಂಗಯ್ಯ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಎ.ಎಸ್. ಸಾಕಮ್ಮ, ಸದಸ್ಯರಾದ ಸದಾನಂದ, ಗೀತಾ ನಂಜುಂಡಸ್ವಾಮಿ, ಮುಖಂಡರಾದ ದ್ಯಾವಪ್ಪ, ರಂಗೇಗೌಡ, ಕೃಷ್ಣ, ಶಿವಸ್ವಾಮಿ, ನರಸಿಂಹ, ವಿವಿ ಸಂಜೆ ಕಾಲೇಜಿನ ಅಧ್ಯಾಪಕರಾದ ಡಾ.ನಿಂಗರಾಜು, ಬಿ.ಎಸ್.ದಿನಮಣಿ, ಎನ್. ಭಾಗ್ಯಶ್ರೀ, ಬಾಲಸುಬ್ರಹ್ಮಣಂ, ಡಾ. ಶಿವಶಂಕರ್, ಎಚ್.ಮನು, ಡಾ.ಪಿ.ರವಿ, ಡಾ.ಎನ್.ಎಸ್.ವಿರೂಪಾಕ್ಷ, ವಿಶ್ವಮಾನವ ಮೈಸೂರು ವಿವಿ ನೌಕರರ ವೇದಿಕೆ ಅಧ್ಯಕ್ಷ ಆರ್.ವಾಸುದೇವ, ನಟರಾಜ್, ಮಹೇಶ್, ಪ್ರಶಾಂತ್, ರಂಗಸ್ವಾಮಿ ಮೊದಲಾದವರು ಇದ್ದರು.