ಕನಕಗಿರಿ(ಕೊಪ್ಪಳ): ದೇಶದಲ್ಲಿ ನಿರ್ಮಾಣವಾಗಿರುವ ದೇವಸ್ಥಾನಗಳು ವಿಶ್ವಕರ್ಮರ ಕೈಯಲ್ಲಿ ಅರಳಿವೆ. ಆದರೆ, ಸಮಾಜ ಇಂದು ಬೀದಿಯಲ್ಲಿ ನಿಂತು ಜೀವನದ ಆಧಾರಕ್ಕಾಗಿ ಸರ್ಕಾರವನ್ನು ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಂಎಲ್‌ಸಿ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಬೈರಾಪುರ ಗ್ರಾಮದಲ್ಲಿ ಗುರುವಾರದಂದು ಸಿಂಧನೂರಿನ ಮಾತೋಶ್ರೀ ಶಿವಶರಣೆ ಪಾರ್ವತಮ್ಮ ಮೌನೇಶ ಆಚಾರಿ ಕೊಂಡಜ್ಜಿಯವರಿಂದ ನಿರ್ಮಿಸಲಾದ ಜಗದ್ಗುರು ಆದಿಲಿಂಗೇಶ್ವರ, ಜಗದ್ಗುರು ಮೌನೇಶ್ವರ, ಬಸವಣ್ಣ, ಕಾಳಿಕಾದೇವಿ, ಗಣೇಶ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ನೂತನವಾಗಿ ನಿರ್ಮಿಸಲಾದ ದೇವಸ್ಥಾನ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವಕರ್ಮ ಸಮಾಜವು ಆರ್ಥಿಕವಾಗಿ ಹಿಂದುಳಿದ ಸಮಾಜವಾಗಿದೆ. ಈ ನಿಟ್ಟಿನಲ್ಲಿ ಸಮಾಜವನ್ನು ಸಂಘಟಿಸಬೇಕಾಗಿದೆ. ಒಂದು ಸಮಾಜವನ್ನು ಸಂಘಟನೆ, ಹೋರಾಟದ ಮೂಲಕ ಕಟ್ಟುವುದು ಸುಲಭದ ಮಾತಲ್ಲ. ಸಮಾಜಕ್ಕಾಗಿ ಹೋರಾಟ ಮಾಡುವವರು ಹುಚ್ಚರಿದ್ದಂತೆ. ನನಗೆ 25 ವರ್ಷಗಳಿಂದ ಈ ಹುಚ್ಚು ಹಿಡಿದಿದೆ. ಆದರೆ, ಅದು ನನ್ನ ಸ್ವಾರ್ಥಕ್ಕಲ್ಲ. ನನ್ನ ಸಮಾಜದವರ ಏಳಿಗೆಗಾಗಿ ಹಿಡಿದಿದೆ. ಆ ಹುಚ್ಚು ನಮ್ಮವರಿಗೆ ಹಿಡಿಯುವವರಿಗೆ ನನಗೆ ಬಿಡುವುದಿಲ್ಲ. ಅದರಂತೆ ಶಿಕ್ಷಕಿಯಾಗಿದ್ದ ಮಾತೋಶ್ರೀ ಪಾರ್ವತೆಮ್ಮ ತಮ್ಮ ನಿವೃತ್ತಿ ಜೀವನದ ಬಳಿಕ ಸಮಾಜಕ್ಕಾಗಿ ದೇವಸ್ಥಾನ ಕಟ್ಟಿಸಿ ಸಮಾಜದವರನ್ನು ಕರೆಯಿಸಿರುವುದು ಹೆಮ್ಮೆಯ ವಿಷಯ ಎಂದರು.
ಸಮಾಜವನ್ನು ಸಂಘಟಿಸಿ ಆದರೆ, ಅದನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಸರ್ಕಾರದ ಸೌಲಭ್ಯ, ಮಕ್ಕಳ ಶಿಕ್ಷಣಕ್ಕಾಗಿ ಸಂಘಟನೆಯ ಬಳಕೆಯಾಗಲಿ ಎಂದು ತಿಳಿಸಿದರು. ದೇವಸ್ಥಾನಕ್ಕೆ ವಯಕ್ತಿಕವಾಗಿ 50 ಸಾವಿರ ಹಾಗೂ ಎಂಎಲ್‌ಸಿ ಅನುದಾನದಲ್ಲಿ 2 ಲಕ್ಷ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಇದಕ್ಕೂ ಮೊದಲು ಬುಧವಾರದಂದು ಮಹಿಳೆಯರ ಕುಂಭ ಕಳಸದೊಂದಿಗೆ ನವಲಿ ಗ್ರಾಮದಿಂದ ಭೈರಾಪುರ ಗ್ರಾಮಕ್ಕೆ ಡೊಳ್ಳು ವಾದ್ಯಗಳೊಂದಿಗೆ ಜಗದ್ಗುರು ಮೌನೇಶ್ವರ ಮೂರ್ತಿ ಮೆರವಣಿಗೆ ಮೂಲಕ ತರಲಾಯಿತು.
ಲೇಬಗೇರಿಯ ನಾಗಮೂತೇರ್ಂದ್ರ ಮಹಾಸ್ವಾಮಿಗಳು, ಜವಳಗೇರಿಯ ಸೂರ್ಯನಾರಾಯಣ ಸ್ವಾಮಿ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಲೋಹಿತ್ ವೈ ಕಲ್ಲೂರು, ಕಾರ್ಯದರ್ಶಿ ಸೋಮನಾಥ ಸುಕಾಲಪೇಟ, ಬ್ರಹ್ಮಗಣೇಶ ವಕೀಲರು, ಮೌನೇಶ ತಿಡಿಗೋಳ ಇತರರಿದ್ದರು.