ಮೈಸೂರು: ದೇಶದಲ್ಲಿ ಶೇ.50 ರಿಂದ 60 ರಷ್ಟು ಸಂಭವಿಸುತ್ತಿರುವ ಸಾವುಗಳು ಜೀವನ ಶೈಲಿ ಆಧಾರಿತವಾಗಿದ್ದು, ಜೀವನಶೈಲಿ ಬದಲಾಯಿಸಿ ಕೊಂಡರೆ ಸಾವಿನ ಪ್ರಮಾಣ ತಗ್ಗಿಸಬಹುದು ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು.
ಶ್ರೀ ರಾಮಕೃಷ್ಣ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ರಾಮಕೃಷ್ಣನಗರದ ರಾಮಕೃಷ್ಣ ವೃತ್ತದಲ್ಲಿ ಶನಿವಾರ ಶ್ರೀ ರಾಮಕೃಷ್ಣ ಪರಮಹಂಸರ 188ನೇ ಜನ್ಮದಿನೋತ್ಸವ ಪ್ರಯುಕ್ತ ‘ಜೀವನ ಶೈಲಿಯ ಕಾಯಿಲೆಗಳು’ ವಿಷಯದ ಕುರಿತು ಏರ್ಪಡಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲ ಬದಲಾಗಿದೆ ಎಂದು ಎಲ್ಲರು ಹೇಳುತ್ತಾರೆ. ನನ್ನ ಪ್ರಕಾರ ಕಾಲ ಬದಲಾಗಿಲ್ಲ, ಜನರು ಬದಲಾಗಿದ್ದಾರೆ ಅಷ್ಟೆ. ಆಧುನಿಕತೆ ಬೆಳೆದಂತೆ ಜನರ ಜೀವನ ಶೈಲಿಯಲ್ಲೂ ಬದಲಾವಣೆಗಳು ಕಾಣಲು ಪ್ರಾರಂಭವಾಯಿತು. ಈ ಹಿಂದೆ ವಯೋವೃದ್ಧರಾದ ಪಾಲಕರನ್ನು ಅವರ ಮಕ್ಕಳು ಆಸ್ಪತ್ರೆಗೆ ಕರೆತರುತ್ತಿದ್ದರು. ಆದರೆ ಇದೀಗ ವಯೋವೃದ್ಧ ಪಾಲಕರು 30-40 ವರ್ಷದ ತಮ್ಮ ಮಕ್ಕಳನ್ನು ಆಸ್ಪತ್ರೆಗೆ ಕರೆ ತರುತ್ತಿರುವುದನ್ನು ಕಾಣುತ್ತಿದ್ದೇವೆ. ಹೀಗಾಗಿ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಉತ್ತಮ ಆರೋಗ್ಯ ಪಡೆಯುವ ಕಡೆಗೆ ಎಲ್ಲರು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ವೇಗದ ಪ್ರಪಂಚದಲ್ಲಿ ಜನರು ಯಂತ್ರಗಳ ರೀತಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಜನರ ನಡುವೆ ಕೃತಕ ಸಂಬಂಧಗಳು ಹೆಚ್ಚಾಗುತ್ತಿದೆ. ಏನಾದರು ಅವಶ್ಯಕತೆ ಇದ್ದಾಗ ಮಾತ್ರ ಮತ್ತೊಬ್ಬರನ್ನು ಮಾತನಾಡಿಸುತ್ತಿರುವುದು ಹೆಚ್ಚಾಗುತ್ತಿದೆ. ಹೀಗಾಗಿ ಪ್ರಪಂಚ ಅವಕಾಶವಾದಿ ಪ್ರಪಂಚವಾಗಿ ಮಾರ್ಪಾಡು ಹೊಂದುತ್ತಿದ್ದು, ಇದು ಜನರ ಅರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ, ರಾಮಕೃಷ್ಣ ಸೇವಾ ಸಂಘದ ಅಧ್ಯಕ್ಷ ಎಂ. ಪಾಪೇಗೌಡ, ಹೃದ್ರೋಗ ತಜ್ಞ ಡಾ.ಎಸ್.ಪಿ. ಯೋಗಣ್ಣ ಹಾಗೂ ಇತರರು ಇದ್ದರು.