ಅಥಣಿ ಗ್ರಾಮೀಣ, ಬೆಳಗಾವಿ: ಪುಸ್ತಕದಲ್ಲಿ ಓದಿ ಕಲಿಯಲಾಗದ ಸಂಗತಿಗಳನ್ನು ಜೀವನವೆನ್ನುವ ವಿಶ್ವವಿದ್ಯಾಲಯ ಕಲಿಸುತ್ತದೆ ಎಂದು ಕೌಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.
ಅಥಣಿ ತಾಲೂಕಿನ ಬಡಚಿ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಸ್ಥಾನದ ಲಕ್ಷ ದೀಪೋತ್ಸವ ಅಂಗವಾಗಿ ಶನಿವಾರ ಜರುಗಿದ ನೂತನ ಮಹಾದ್ವಾರಕ್ಕೆ ಕಳಸಾರೋಹಣ ನೆರವೇರಿಸಿ ಅವರು ಮಾತನಾಡಿ, ನಾವು ಹೇಗೆ ಇದ್ದರೂ, ಜನ ಮಾತನಾಡಿಕೊಳ್ಳುತ್ತಾರೆ. ಬೆನ್ನು ತಟ್ಟೋರು ನಾಲ್ಕು ಜನರಿದ್ದರೆ, ಹಿಂದೆ ಮಾತನಾಡೋರು ನಾಲ್ಕು ಜನ ಇದ್ದೇ ಇರುತ್ತಾರೆ. ಮೆಚ್ಚಿ ಮಾತನಾಡಿದಾಗ ಉಬ್ಬದೆ, ಚುಚ್ಚಿ ಮಾತನಾಡಿದಾಗಲೂ ಕುಗ್ಗದೆ ಮುಂದೆ ಸಾಗಬೇಕು ಎಂದರು.
ಹುಲಜಂತಿಯ ಮಾಳಿಂಗರಾಯ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿ, ಹಾಲುಮತ ಸಮುದಾಯಕ್ಕೆ ಭವ್ಯವಾದ ಇತಿಹಾಸವಿದೆ. ಶ್ರದ್ಧೆ ಮತ್ತು ಭಕ್ತಿಗೆ ಸಮುದಾಯ ಹೆಸರುವಾಸಿಯಾಗಿದೆ. ಭಕ್ತಿಯಿಂದ ಕನಕದಾಸರು ಕೃಷ್ಣನನ್ನು ಒಲಿಸಿಕೊಂಡರೆ ಹುಲಿಗಿಣ್ಣು ತಂದ ಮಾಳಿಂಗರಾಯ ಹಾಲುಮತ ಸಮುದಾಯದ ಘನತೆ ಹೆಚ್ಚಿಸಿದ್ದಾರೆ ಎಂದರು.
ಯಕ್ಕಂಚಿ ಗುರುದೇವ ತಪೋವನದ ಗುರುಪಾದ ಸ್ವಾಮೀಜಿ, ಬಂಡಿಗಣಿಮಠದ ಚಕ್ರವರ್ತಿ ಅನ್ನದಾನೇಶ್ವರರು ಪ್ರವಚನ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭ ಹೊತ್ತು ಸುಮಂಗಲೆಯರು ಸಾಗಿದರು. ಮಹೇಶ ದೇವರು, ಸುರೇಶ ಮಹಾರಾಜರು, ವಿಠ್ಠಲ ಮಹಾರಾಜರು, ಸಿದ್ಧಲಿಂಗೇಶ್ವರ ಮಹಾರಾಜರು, ಏಕನಾಥ ಚವ್ಹಾಣ, ಗೌರೀಶ ಲೆಂಡೆ, ಬೀರಪ್ಪ ಪೂಜಾರಿ, ರವಿಗೌಡ ಪಾಟೀಲ, ಸಂತೋಷ ಮಾದರ, ವಿಠ್ಠಲ ಆಜೂರ, ರಾಜಕುಮಾರ ದೇಸಾಯಿ, ವಿಜಯಕುಮಾರ ಬಡಚಿ ಇತರರು ಇದ್ದರು.