ಮೈಸೂರು: ಕಾವೇರಿ ನದಿಯ ಚರಿತ್ರೆ, ಕರ್ನಾಟಕ ಮತ್ತು ತಮಿಳುನಾಡಿನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಚಿತ್ರಣ ಪರಿಚಯಿಸುವ ‘ಕಾವೇರಿ ಕಲಾ ಗ್ಯಾಲರಿ’ ಶನಿವಾರ ಸಂಜೆ ಉದ್ಘಾಟನೆಗೊಂಡಿದ್ದು, ಪ್ರವಾಸಿಗರ ವೀಕ್ಷಣೆಗೆ ತೆರೆದುಕೊಂಡಿದೆ.
ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಈ ಗ್ಯಾಲರಿಯಲ್ಲಿ ಕಾವೇರಿ ನದಿಯ ಹುಟ್ಟಿನಿಂದ ಹಿಡಿದು ಸಮುದ್ರ ಸೇರುವವರೆಗೆ ಎಲ್ಲ ಪ್ರೇಕ್ಷಣೀಯ ಸ್ಥಳಗಳು, ಪ್ರವಾಸಿ ತಾಣಗಳು, ಐತಿಹಾಸಿಕ ಸ್ಥಳಗಳು ಸೇರಿ ಧಾರ್ಮಿಕ ಕ್ಷೇತ್ರಗಳ ಪರಿಚಯ ಆಗಲಿದೆ.
ಗ್ಯಾಲರಿ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕಾವೇರಿ ನದಿಗೆ ನಾಡಿನಲ್ಲಿ ವಿಶೇಷ ಸ್ಥಾನಮಾನ ಗೌರವ ಇದೆ. ಪಾವಿತ್ರ್ಯತೆ ಇದೆ. ದೈವ ಸ್ವರೂಪ ಎಂದು ಪೂಜೆ ಮಾಡುತ್ತಾರೆ. ಕಾವೇರಿ ಬಗ್ಗೆ ಹೊರಗಿನವರಿಗೆ ಹೆಚ್ಚು ಮಾಹಿತಿ ಇಲ್ಲ. ಈ ಬಗ್ಗೆ ತಿಳಿಸುವ ಪ್ರಯತ್ನವಾಗಿ ಈ ಗ್ಯಾಲರಿ ನಿರ್ಮಾಣವಾಗಿದೆ ಎಂದರು
ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‌ಗೌಡ, ಮೇಯರ್ ಶಿವಕುಮಾರ್, ಉಪಮೇಯರ್ ರೂಪಾ ಯೋಗೇಶ್ ಇದ್ದರು.
3.5 ಕೋಟಿ ರೂ. ವೆಚ್ಚ
ವಸ್ತುಪ್ರದರ್ಶನ ಪ್ರಾಧಿಕಾರದ ಕಾರಂಜಿ ಕಟ್ಟಡದಲ್ಲಿ ಅಂದಾಜು 19 ಸಾವಿರ ಚದರ ಅಡಿ ಪ್ರದೇಶದಲ್ಲಿ ಸುಮಾರು 3.5 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಗ್ಯಾಲರಿ ನಿರ್ಮಿಸಲಾಗಿದೆ. ನೆಲ ಮಹಡಿಯಲ್ಲಿ ನದಿಗೆ ಸಂಬಂಧಿಸಿದ ವಿವರಗಳನ್ನು ಜೋಡಿಸಲಾಗಿದೆ.
ಪವಿತ್ರ ‘ಗಂಗಾ’ ನದಿ ಗ್ಯಾಲರಿಯನ್ನು ಅಲಹಾಬಾದ್‌ನಲ್ಲಿ ಮತ್ತು ‘ಬ್ರಹ್ಮಪುತ್ರ’ ನದಿಯ ಗ್ಯಾಲರಿಯನ್ನು ಅಸ್ಸಾಂನ ಗುವಾಹಟಿಯಲ್ಲಿ ನಿರ್ಮಿಸಿರುವ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಇಂಡಿಯಾ (ಎನ್‌ಎಎಸ್‌ಐ) ಕಾವೇರಿ ಸಂಗ್ರಹಾಲಯ ನಿರ್ಮಾಣ ಮಾಡಿದ್ದು, ಕರ್ನಾಟಕ ಜ್ಞಾನ ಆಯೋಗದ ನಡುವೆ ಒಪ್ಪಂದ ಮಾಡಿಕೊಂಡು ಗ್ಯಾಲರಿ ರೂಪಿಸಲಾಗಿದೆ.
ನೆಲ ಅಂತಸ್ತಿನ ಪ್ರವೇಶ ದ್ವಾರದಲ್ಲಿ ಪ್ರವಾಸಿಗರಿಗೆ ಮೇಕೆದಾಟು, ಆಕರ್ಷಕ ಜಲಪಾತಗಳ ಚಿತ್ರ ಆಕರ್ಷಿಸುತ್ತದೆ. ಗ್ಯಾಲರಿಯ ಒಳಭಾಗದಲ್ಲಿ ಕಾವೇರಿ ತಲಕಾವೇರಿಯಿಂದ ಪೂಂಪುಹಾರ್‌ವರೆಗೆ ಸಾಗುವ ನದಿಯ ನಕಾಶೆ, ಪ್ರವಾಸಿ ಕೇಂದ್ರಗಳು, ಸಾಂಸ್ಕೃತಿಕ ವಿವರಗಳು ಇವೆ.
ಪ್ರವೇಶ ದರ:
ನಿರ್ವಹಣೆ ದೃಷ್ಟಿಯಿಂದ ಕನಿಷ್ಠ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ದೊಡ್ಡವರಿಗೆ 20 ರೂ. ಮಕ್ಕಳಿಗೆ 10 ರೂ. ನಿಗದಿಪಡಿಸಲಾಗಿದೆ. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವೀಕ್ಷಣೆ ಮಾಡಬಹುದಾಗಿದೆ.