ಜಿಲ್ಲೆ

ಜೀವನದಿ ‘ಕಾವೇರಿ’ ಜೀವನ ಸಾಕ್ಷ್ಯಚಿತ್ರ

ಚಾಮರಾಜನಗರ: ಕನ್ನಡ ನಾಡಿನ ಜೀವನದಿ ಕಾವೇರಿ ಋತುಮಾನಕ್ಕೆ ತಕ್ಕಂತೆ ಪೋಷಿಸುವ ವೈವಿಧ್ಯಮಯ ಪರಿಸರ ಮತ್ತು ವನ್ಯಜೀವಿ ವ್ಯವಸ್ಥೆಯನ್ನು, ರಾಜ್ಯದಲ್ಲಿ ಹೆಚ್ಚು ಪ್ರಚಲಿತವಲ್ಲದ ಎರಡು ವನ್ಯಜೀವಿತಾಣಗಳ ಬಗೆಗಿನ ಸುಂದರ ಸೋಜಿಗವನ್ನು, ಹಿಂದೆಂದೂ ದಾಖಲಾಗದ ನೈಸರ್ಗಿಕ ಕೌತುಕಗಳನ್ನು ಮೊಟ್ಟ ಮೊದಲ ಬಾರಿಗೆ ದಾಖಲಿಸಿರುವ ಸಾಕ್ಷ್ಯಚಿತ್ರವೊಂದು ಸಿದ್ಧಗೊಂಡಿದೆ.

ಅರಣ್ಯ ಇಲಾಖೆ ಸಹಭಾಗಿತ್ವ, ಕರ್ನಾಟಕ ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತ ಡಾ.ಸಂಜಯ್ ಗುಬ್ಬಿ ಕಾರ್ಯನಿರ್ವಾಹಕ ನಿರ್ಮಾಪಕ ಮತ್ತು ವೈಜ್ಞಾನಿಕ ಸಲಹೆ, ಪ್ರಸಿದ್ಧ ವನ್ಯಜೀವಿ ಚಿತ್ರ ನಿರ್ಮಾಪಕ ಸರವಣ ಕುಮಾರ್(ಸರಾ) ನಿರ್ದೇಶನದಲ್ಲಿ ‘ಕಾವೇರಿ ರಿವರ್ ಆ್ ಲ್ೈ’ ಎಂಬ 55 ನಿಮಿಷದ ಸಾಕ್ಷ್ಯಚಿತ್ರ ಇಂಗ್ಲೀಷ್‌ನಲ್ಲಿ ನಿರ್ಮಾಣಗೊಂಡಿದೆ.

ಕೋಟ್ಯಾಂತರ ಜೀವರಾಶಿಗಳಿಗೆ ಸೆಲೆಯಾಗಿರುವ ಕಾವೇರಿ ನದಿಯ ಬೇಸಿಗೆ ಕಾಲದ ಚಿತ್ರಣ, ವನ್ಯಜೀವಿಗಳ ಆಶ್ಚರ್ಯಭರಿತ ಸಾಮರ್ಥ್ಯದಿಂದ ಬದುಕುಳಿಯುವ ಕಲೆ, ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮಗಳ ಸುಂದರ ಭೂ ಪ್ರದೇಶದಲ್ಲಿ ವನ್ಯಜೀವಿಗಳನ್ನು ಹಿಂದೆಂದೂ ಕಾಣದ ರೀತಿಯಲ್ಲಿ ನೋಡುವ ಅವಕಾಶವನ್ನು ಸಾಕ್ಷ್ಯಚಿತ್ರ ನೀಡಲಿದೆ.

ಈ ಸಾಕ್ಷ್ಯಚಿತ್ರವನ್ನು ಪೂರ್ಣಗೊಳಿಸಲು ನಾಲ್ಕು ವರ್ಷಗಳನ್ನು ತೆಗೆದುಕೊಳ್ಳಲಾಗಿದೆ. ಕೋವಿಡ್ ಮತ್ತು ಅಕಾಲಿಕ ಹವಾಮಾನ ವೈಪರೀತ್ಯದ ತೊಡುಕುಗಳ ಮಧ್ಯೆಯೂ ಚಿತ್ರ ಸುಂದರವಾಗಿ ಪೂರ್ಣಗೊಂಡಿದೆ. ಪ್ರಸ್ತುತ ಇದು ಇಂಗ್ಲೀಷ್ ಭಾಷೆಯ ನಿರೂಪಣೆಯಲ್ಲಿ ತಯಾರಾಗಿದ್ದು, ಕನ್ನಡದ ನಿರೂಪಣೆಯುಳ್ಳ ಸಾಕ್ಷ್ಯಚಿತ್ರ ಬಿಡುಗಡೆಗೆ ಸಿದ್ಧತೆ ನಡೆದಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಖ್ಯಾತ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಸಾಕ್ಷ್ಯಚಿತ್ರ ಪರಿಸರ ರಕ್ಷಣೆ ಬಗ್ಗೆ ಉಪದೇಶ ಮಾಡದೆ ದಟ್ಟ ಅನುಭವ ಕಟ್ಟಿಕೊಟ್ಟು ಸೂಚ್ಯವಾಗಿ ಹೇಳುತ್ತದೆ. ಈ ಚಿತ್ರದ ಕನ್ನಡ ನಿರೂಪಣೆ ಬರಲಿ’ ಎಂದಿದ್ದಾರೆ.

ಚಾ.ನಗರದಲ್ಲಿ ಬಿಡುಗಡೆ:

ವನ್ಯಜೀವಿ ವಿಸ್ಮಯ ಸಾಕ್ಷ್ಯಚಿತ್ರವಾಗಿರುವ ‘ಕಾವೇರಿ ರಿವರ್ ಆ್ ಲ್ೈ’ ಪ್ರಸ್ತುತ ಇಂಗ್ಲೀಷ್ ನಿರೂಪಣೆಯಲ್ಲಿ ಸಿದ್ಧಗೊಂಡಿದೆ. ಇತ್ತೀಚಿಗೆ ಇದನ್ನು ಬೆಂಗಳೂರಿನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪಿಸಿಸಿಎ್ ಸುಭಾಷ್ ಮಾಲ್ಕಡೆ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಚಿತ್ರನಟ ದತ್ತಣ್ಣ ಮತ್ತು ಇತರರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಕ್ಷ್ಯಚಿತ್ರ ತಂಡ ಚಿತ್ರಕ್ಕೆ ಕನ್ನಡದ ನಿರೂಪಣೆಯನ್ನು ಅಳವಡಿಸಲು ತಯಾರಿ ನಡೆಸಿದೆ. ಈಗಾಗಲೇ ಉತ್ತಮ ಕಂಠ ಸಿರಿ ಹೊಂದಿರುವ ಪ್ರಸಿದ್ಧ ನಟರನ್ನು ಸಂಪರ್ಕಿಸುವಲ್ಲಿ ಕಾರ್ಯ ಮಗ್ನವಾಗಿದೆ. ಕನ್ನಡದ ನಿರೂಪಣೆಯಲ್ಲಿ ಸಿದ್ಧಗೊಂಡ ಸಾಕ್ಷ್ಯಚಿತ್ರವನ್ನು ಚಾಮರಾಜನಗರ ಜಿಲ್ಲೆಯಲ್ಲೇ ಬಿಡುಗಡೆ ಮಾಡಬೇಕೆಂದುಕೊಂಡಿದೆ.

ವಿಸ್ಮಯಗಳ ದೃಶ್ಯಕಾವ್ಯ: ಕಾವೇರಿ-ರಿವರ್ ಆ್ ಲ್ೈ ಸಾಕ್ಷ್ಯಚಿತ್ರದ ಟ್ರೇಲರ್ ಅನ್ನು ಎರಡು ವಾರಗಳ ಹಿಂದೆ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಇದರಲ್ಲಿ ಕಾಣಸಿಗುವ ಸಾಕ್ಷ್ಯಚಿತ್ರದ ಕೆಲವು ದೃಶ್ಯಾವಳಿಗಳು ಸೋಜಿಗದಂತಿವೆ. ಕಲಾಕೃತಿಯಂತೆ ಕಾಣುವ ಬೆಳ್ಳಿ ಮೋಡಗಳ ನಡುವಿನ ಬೆಟ್ಟಗಳು, ಕಾಡಿನ ಬಣ್ಣವನ್ನು ಪ್ರತಿಬಿಂಬಿಸುತ್ತಾ ಸಮೃದ್ಧವಾಗಿ ಹರಿಯುವ ಕಾವೇರಿ ನದಿ, ಧುಮ್ಮಿಕ್ಕುವಾಗ ಹಾಲ್ನೊರೆ, ಬೆಟ್ಟಗಳ ಅಂಚಿನಲ್ಲಿ ನಿಂತರೂ ನಿಲ್ಲದೆ ಓಡುವ ಮೋಡಗಳು, ಮಕ್ಕಳು ಮರಿಗಳೊಂದಿಗೆ ಗೀಳಿಡುವ ಹಿಂಡು ಆನೆಗಳು, ಜಲದ ಜೀವ ಮೀನಿನ ಸಂತಾನೋತ್ಪತ್ತಿ, ನೀರಿನೊಳಗಿಂದ ಕಪ್ಪೆಗಳ ಕುಪ್ಪಾಟ, ನೀರು ನಾಯಿಗಳ ಚಿನ್ನಾಟ, ದಟ್ಟ ಕಾಡು, ನರಿ, ಕೋತಿ, ಕಡವೆ, ಮೊಸಳೆ..ಇತ್ಯಾದಿ ಪ್ರಾಣಿ ಮತ್ತು ಪ್ರಕೃತಿ ಸಂಪತ್ತನ್ನು ದೃಶ್ಯಕಾವ್ಯವಾಗಿಸಿದೆ. ಜತೆಗೆ ಬೇಸಿಗೆ ಕಾಲದಲ್ಲಿ ಬದಲಾಗುವ ಕಾಡು, ವನ್ಯಜೀವಿಗಳಿಗೆ ಎದುರಾಗುವ ಬವಣೆಗಳಿಗೆ ಕನ್ನಡಿ ಹಿಡಿದಿದೆ. ಒಣಗಿ ನಿಂತ ಬೆಟ್ಟ,ಗುಡ್ಡಗಳು, ಮಧ್ಯೆ ಬರಿದಾಗಿ ಹೋದ ಕಾವೇರಿ ನದಿ, ಶುದ್ಧ ಜಲಕ್ಕಾಗಿ ಸೊಂಡಿಲಿನಲ್ಲಿ ಹಳ್ಳ ತೋಡಿ ನೀರಿಗಾಗಿ ಉಸಿರು ಉಯ್ಯುವ ಆನೆಯ ದೃಶ್ಯಗಳು ಕಾವೇರಿ ನದಿಯನ್ನೇ ನಂಬಿರುವ ಕಾಡಿನ ಮತ್ತೊಂದು ಮುಖವನ್ನು ಅನಾವರಣಗೊಳಿಸುವಂತಿದೆ.

ಈ ವಾಣಿಜ್ಯೇತರ ಸಾಕ್ಷ್ಯಚಿತ್ರ ಕರ್ನಾಟಕ ಜೀವರಾಶಿಗೆ ಸಲ್ಲಿಸುವ ಒಂದು ಗೌರವ. ಈ ಚಿತ್ರಕ್ಕೆ ಕನ್ನಡ ನಿರೂಪಣೆ ಪೂರ್ಣಗೊಳಿಸಿ ಚಾಮರಾಜನಗರದಲ್ಲಿ ಬಿಡುಗಡೆಗೊಳಿಸಬೇಕು ಎಂಬ ಹಂಬಲವಿದೆ. ಡಾ.ಸಂಜಯ್ ಗುಬ್ಬಿ, ವನ್ಯಜೀವಿ ತಜ್ಞ ಸಾಕ್ಷ್ಯ ಚಿತ್ರ ಕಾವೇರಿ ನೋಡಿದೆ. ಇದು ಹಸಿರು ಕಾವೇರಿಯಲ್ಲ. ಕಂದು ಕಾವೇರಿ.ಸಂಜಯ್ ಗುಬ್ಬಿ ನಿರ್ಮಿಸಿ ಸರಾ ನಿರ್ದೇಶಿಸಿರುವ ಈ ಚಿತ್ರದ ವಿಶೇಷವೆಂದರೆ ಪರಿಸರ ರಕ್ಷಣೆ ಬಗ್ಗೆ ಉಪದೇಶ ಮಾಡದೆ ದಟ್ಟ ಅನುಭವ ಕಟ್ಟಿಕೊಟ್ಟು ಸೂಚ್ಯವಾಗಿ ಹೇಳುತ್ತದೆ. ಛಾಯಾಗ್ರಹಣ, ಸಂಗೀತ, ಶಬ್ಧ ವಿನ್ಯಾಸಗಳೆಲ್ಲ ಶ್ರೇಷ್ಠ ದರ್ಜೆಯವು. ಈ ಚಿತ್ರದ ಕನ್ನಡ ನಿರೂಪಣೆ ಬರಲಿ. ನಾಗತಿಹಳ್ಳಿ ಚಂದ್ರಶೇಖರ್, ಖ್ಯಾತ ಚಿತ್ರ ನಿರ್ದೇಶಕ