ಶಿರಸಿ: ಲೋಕೋತತ್ತರ ವ್ಯಕ್ತಿತ್ವ ಇರುವವನು, ಅಮೃತತ್ವ ಸ್ಥಿತಿ ಪಡೆದವನು, ಜೀವನದ ಆಚೆಗಿನ ಸತ್ಯ ಕಂಡವನು ಪ್ರಭು ಶ್ರೀ ರಾಮಚಂದ್ರ ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಶ್ರೀರಾಮನನ್ನು ಬಣ್ಣಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಯಕ್ಷ ಶಾಲ್ಮಲಾ, ವಿಶ್ವ ಶಾಂತಿ ಸೇವಾ ಟ್ರಸ್ಟ್ನಿಂದ ಮುಂಡಿಗೇಸರ ದೇವಸ್ಥಾನದಲ್ಲಿ ಆಯೋಜಿಸಿರುವ ಶ್ರೀರಾಮಾನುಭವ ಸರಣಿ ತಾಳಮದ್ದಲೆ ಸಪ್ತಾಹವನ್ನು ಭಾನುವಾರ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಜೀವಿಸಿರುವಾಗಲೇ ಮುಕ್ತಿಯ ಅನುಭವ (ಜೀವನ್ಮುಕ್ತಿ) ಪಡೆದವನು ಪ್ರಭು ಶ್ರೀರಾಮ. ಒಮ್ಮೆ ಜೀವನ್ಮುಕ್ತಿ ಬಾಗಿಲು ತೆರೆದರೆ ಮುಚ್ಚುವುದಿಲ್ಲ. ಮತ್ತೆ ಮೋಹದ ಮರೆವು ಆಗುವದಿಲ್ಲ. ಸಾಮಾನ್ಯರಿಗೆ ಅದು ಅರಿವಾಗುವದಿಲ್ಲ ಎಂದರು.
ಶ್ರೀ ರಾಮಾನುಭವಕ್ಕೆ ಮುನ್ನುಡಿ ನೀಡಿದ ವಾಗ್ಮಿ ಲಕ್ಷ್ಮೀಶ ತೋಳ್ಪಾಡಿ, ರಾಮಾಯಣ, ಕಲೆಯ ಕಥೆ, ಆಧ್ಯಾತ್ಮದ ಕಥೆಯನ್ನೂ ಹೇಳುತ್ತದೆ. ಬದುಕಿಗೆ ಮಾರ್ಗದರ್ಶಿಯಾಗಿದೆ. ರಾಮನ ಅನುಭವವನ್ನು ವಾಲ್ಮೀಕಿ ಕಾವ್ಯದ ಮೂಲಕ ಮಾಡಿಸಿಕೊಡುವುದೇ ಶ್ರೀ ರಾಮಾನುಭವ ಎಂದರು.
ಸಪ್ತಾಹದಲ್ಲಿ ಶ್ರೀ ರಾಮನ ಪಾತ್ರ ನಿರ್ವಹಿಸುವ ವಿ. ಉಮಾಕಾಂತ ಭಟ್ಟ ಕೆರೇಕೈ, ಉಕ ಸಂಸದರು ವೇದಿಕೆಯಲ್ಲಿದ್ದರು. ಮುಂಡಿಗೇಸರ ದೇವಸ್ಥಾನದ ಅಧ್ಯಕ್ಷ ಎಂ.ಡಿ. ಹೆಗಡೆ ಬೆಳ್ಳೇಕೇರಿ ಫಲ ಸಮರ್ಪಿಸಿದರು. ಯಕ್ಷ ಶಾಲ್ಮಲಾದ ಕಾರ್ಯದರ್ಶಿ ನಾಗರಾಜ ಜೋಶಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಆರ್.ಎಸ್. ಹೆಗಡೆ ಭೈರುಂಬೆ ವಂದಿಸಿದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಕಾರ್ಯಕ್ರಮ ನಿರೂಪಿಸಿದರು.
ಮೊದಲ ದಿನ ಸೀತಾ ಕಲ್ಯಾಣದ ತಾಳಮದ್ದಲೆ ನಡೆಯಿತು. ಜನಕನಾಗಿ ಎಂ.ಎನ್. ಹೆಗಡೆ ಹಲವಳ್ಳಿ, ತಾಟಕನಾಗಿ ಜಿ.ಎಲ್. ಹೆಗಡೆ, ಲಕ್ಷ್ಮಣನಾಗಿ ಶ್ರೀಧರ ಚಪ್ಪರಮನೆ, ಸುಬಾಹುವಾಗಿ ಜಿ.ಜಿ. ಹೆಗಡೆ ಕಾಳೇನಳ್ಳಿ, ಮಾರೀಚನಾಗಿ ರಮಾನಂದ ಹಲ್ಲೆಕೊಪ್ಪ ಪಾತ್ರ ನಿರ್ವಹಿಸಿದರು. ಪ್ರಧಾನ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ ಯಲ್ಲಾಪುರ, ವಿಘ್ನೇಶ್ವರ ಕೆಸರಕೊಪ್ಪ ಇದ್ದರು.
ಪಾದುಕಾ ಪ್ರದಾನ ಇಂದು
ಡಿ. 7ರಂದು ‘ಪಾದುಕಾ ಪ್ರದಾನ’ ಪ್ರಸಂಗ ಆಯೋಜಿಸಲಾಗಿದ್ದು, ಅತಿಥಿ ಕಲಾವಿದರಾಗಿ ಸತೀಶ ದಂಟಕಲ್, ಶ್ರೀಪತಿ ಕಂಚಿಮನೆ, ಜಿ.ಎಲ್. ಹೆಗಡೆ, ಮೋಹನ ಹೆಗಡೆ, ಹಲವಳ್ಳಿ, ಡಿ.ಕೆ. ಗಾಂವಕರ್, ಪದ್ಮನಾಭ ಅರೇಕಟ್ಟ ಭಾಗವಹಿಸುವರು.