ಜಿಲ್ಲೆ

ಜೀವನದಲ್ಲಿ ಬದಲಾವಣೆ ಬೆಳವಣಿಗೆ ಎರಡೂ ಬೇಕು:ಕಾರ್ಜುವಳ್ಳಿ ಹಿರೇಮಠದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ

ಆಲೂರು: ಜೀವನದ ಉನ್ನತಿಗೆ ಮತ್ತು ಗೆಲುವಿಗೆ ಸಂಸ್ಕಾರ ಸಂಸ್ಕೃತಿಗಳೇ ಮೂಲ ಬಂಡವಾಳ. ಜನಮನವನ್ನು ಜಾಗೃತಿಗೊಳಿಸಲು ಧರ್ಮ ಬೇಕು. ಮನುಷ್ಯ ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಅವಶ್ಯಕವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಆಲೂರು ತಾಲೂಕಿನ ಕಾರ್ಜುವಳ್ಳಿ ಹಿರೇಮಠದಲ್ಲಿ ಮನೆ ಮನೆಗೆ ರೇಣುಕ-ಮನ ಮನಕ್ಕೆ ರೇಣುಕ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಶುಕ್ರವಾರ ಜರುಗಿದ ಧರ್ಮ ಸಂಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಮನುಷ್ಯನಿಗೆ ಹೆತ್ತ ತಾಯಿ ಹಾಗೂ ಹೊತ್ತ ಭೂಮಿ ಎಷ್ಟು ಮುಖ್ಯವೋ ಧರ್ಮವೂ ಅಷ್ಟೇ ಮುಖ್ಯ. ತಾನು ಎಲ್ಲರಿಗಾಗಿ ಅನ್ನುವುದೇ ನಿಜವಾದ ಧರ್ಮ. ಸತ್ಯ, ಪ್ರಾಮಾಣಿಕತೆಗಿಂತ ಹೆಚ್ಚು ಉದಾತ್ತವಾದ ಧರ್ಮ ಇನ್ನೊಂದಿಲ್ಲ ಎಂದರು.
ಸದೃಢ ಸಮೃದ್ಧ ನಾಡು ಕಟ್ಟುವುದೇ ನಮ್ಮೆಲ್ಲರ ಗುರಿಯಾಗಿರಬೇಕು. ಸಕಲ ಜೀವಾತ್ಮರ ಒಳಿತಿಗಾಗಿ ಸದಾ ಶ್ರಮಿಸಿದ ವೀರಶೈವ ಧರ್ಮಕ್ಕೆ ಶಿವಾಗಮಗಳೇ ಮೂಲ ಬೇರುಗಳು. ಶ್ರೀ ಜಗದ್ಗುರು ರೇಣುಕಾಚಾರ್ಯರು ಸದಾ ಶ್ರಮಿಸಿದ ಚಿಂತನೆಗಳಲ್ಲಿ ರೇಣುಕ ಗೀತೆಯಲ್ಲಿ ಬರುವ ಆಧ್ಯಾತ್ಮ ಚಿಂತನೆಗಳು ದಾರಿದೀಪವಾಗಲೆಂದು ಶುಭ ಹಾರೈಸಿದರು. ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಭಕ್ತರ ಏಳಿಗೆಗಾಗಿ ನಿರಂತರ ಶ್ರಮ ವಹಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.
ಸಮಾರಂಭದ ನೇತೃತ್ವ ವಹಿಸಿದ ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಒಳ್ಳೆಯ ಮಾತಿನಲ್ಲಿ ಬದುಕನ್ನು ಪರಿವರ್ತಿಸುವ ಶಕ್ತಿಯಿದೆ. ಆದರ್ಶ ಗುಣ ಮೌಲ್ಯಗಳ ಧರ್ಮ ವೀರಶೈವ. ಅಸತ್ಯದಿಂದ ಸತ್ಯದೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ಸಾವಿನಿಂದ ಸಾವಿಲ್ಲದೆಡೆಗೆ ಕರೆದೊಯ್ಯುವುದೇ ಗುರುವಿನ ಪರಮ ಕರ್ತವ್ಯವಾಗಿದೆ. ಮನೆ ಮನೆಗೆ ರೇಣುಕ-ಮನ ಮನಕ್ಕೆ ರೇಣುಕ ಕಾರ್ಯಕ್ರಮ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಈ ಸಮಾವೇಶ ಹಮ್ಮಿಕೊಂಡಿದ್ದು ತಮಗೆ ಆತ್ಮ ಸಂತೋಷ ಉಂಟು ಮಾಡಿದೆ ಎಂದರು.
ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಅವರು ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ಸಂಕಲಾಪುರ ಧರ್ಮರಾಜೇಂದ್ರ ಸ್ವಾಮಿಗಳು ನುಡಿ ನಮನ ಸಲ್ಲಿಸಿದರು. ಎಸ್.ಎಸ್.ಶಿವಮೂರ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಶಸ್ತಿ ಪ್ರದಾನ:
ಆಲೂರಿನ ಎಂ.ಎಸ್.ಮಹೇಶ್ ಮುರುದೂರು ಇವರಿಗೆ ಗುರು ಸೇವಾ ಸಂಜೀವಿನಿ, ಕಾರ್ಜುವಳ್ಳಿಯ ಕೆ.ಕೆ.ಹಾಲಪ್ಪ ಇವರಿಗೆ ಗುರು ಸೇವಾ ನಿಷ್ಟ, ಕೆ.ಪಿ.ಯಶವಂತ ಇವರಿಗೆ ಗುರು ಸೇವಾ ಕಿಂಕರ, ಬಿ.ಎನ್.ಶಿವನಂಜಪ್ಪ ಇವರಿಗೆ ಮರಣೋತ್ತರವಾಗಿ ಧರ್ಮ ಸೇವಾ ನಿಷ್ಠ, ತಿಪ್ಪಾಪುರದ ಟಿ.ಎನ್.ಗುರುಶಾಂತ ಇವರಿಗೆ ಧರ್ಮ ಸೇವಾ ಸಿಂಧು, ದೊಡ್ಡಗದ್ದವಳ್ಳಿ ವೇ.ಡಿ.ಎ.ದೇವರಾಜ ಶಾಸ್ತ್ರಿಗಳಿಗೆ ಧರ್ಮ ಸೇವಾ ರತ್ನ ಪ್ರಶಸ್ತಿಗಳನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಪ್ರದಾನ ಮಾಡಿ ಆಶೀರ್ವದಿಸಿದರು.
ಹಾಗೆಯೇ ನ್ಯಾಯವಾದಿ ಎಂ.ಎಸ್.ಮಹೇಶ, ಗುರುಶಾಂತ ಟಿ.ಎನ್.ತಿಪ್ಪಪುರ, ಪತ್ರಕರ್ತ ಹೆಬ್ಬಾಳು ಹಾಲಪ್ಪ ಬೇಲೂರು, ಜಿ.ಎಸ್.ಉಮೇಶ್ ಕುಮಾರ, ನಾಗರನವಿಲೆ ಶಿವಾನುಗ್ರಹ ಸೇವಾ ಪ್ರತಿಷ್ಠಾನ ಇವರೆಲ್ಲರಿಗೂ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಮನೆ ಮನೆಗೆ ರೇಣುಕ-ಮನ ಮನಕ್ಕೆ ರೇಣುಕ ಅಂಗವಾಗಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಕ್ತರಿಗೆ ಶುಭ ಹಾರೈಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.
ಮುಖ್ಯ ಅತಿಥಿಗಳಾಗಿ ಆಲೂರು-ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಬೇಲೂರು ಶಾಸಕ ಎಚ್.ಕೆ.ಸುರೇಶ್, ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಜಗದೀಶ್ ಕಬ್ಬಿನಹಳ್ಳಿ, ಸತ್ಯಾ, ಡಾ.ಎಂ.ಈ.ಜಯರಾಜ್ ಇತರರು ಪಾಲ್ಗೊಂಡಿದ್ದರು.