ಭಾಲ್ಕಿಯ ಚನ್ನಬಸವಾಶ್ರಮ ಪರಿಸರದಲ್ಲಿ ಶನಿವಾರ ಆಯೋಜಿಸಿದ್ದ ಹಾನಗಲ್ ಶಿವಯೋಗಿಗಳ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಬೀದರ್ ವಿಶ್ವವಿದ್ಯಾಲಯ ಆಡಳಿತ ಮಂಡಳಿಯ ನೂತನ ಸದಸ್ಯರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಶ್ರೀ ಗುರುಬಸವ ಪಟ್ಟದ್ದೇವರು, ಬಸವ ಮುರುಘೇಂದ್ರ ಶ್ರೀ, ವಿಜಯಕುಮಾರ ಪಾಟೀಲ್, ಸುಶೀಲಾಬಾಯಿ ಉಪ್ಪಿನ್ ಇತರರಿದ್ದರು. 
ಜಿಲ್ಲೆ

ಜೀವನದಲ್ಲಿ ನಂಬಿಕೆ-ವಿಶ್ವಾಸವೇ ದೊಡ್ಡದು

ರಾಜು ಯಮಕನಮರಡಿ

ಭಾಲ್ಕಿ: ಶರಣರ ಸಂಗದಿಂದ ಮನುಷ್ಯನ ಜೀವನದಲ್ಲಿ ಶಾಂತಿ, ನೆಮ್ಮದಿ ಕಂಡುಕೊಳ್ಳಲು ಸಾಧ್ಯವಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.

ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದಿಂದ ಶನಿವಾರ ಆಯೋಜಿಸಿದ್ದ ಹಾನಗಲ್ ಕುಮಾರ ಶಿವಯೋಗಿಗಳ ೯೩ನೇ ಸ್ಮರಣೋತ್ಸವ ಮತ್ತು ೩೦೯ನೆಯ ಮಾಸಿಕ ಶರಣ ಸಂಗಮ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವಿಶ್ವಾಸದಿಂದ ಬಾಳಿದರೆ ಜೀವನ ಸುಖಿಯಾಗುತ್ತದೆ. ಅಧ್ಯಾತ್ಮಿಕ ಜೀವನದಲ್ಲಿ ಹಾಗೂ ಲೌಕಿಕ ಜೀವನದಲ್ಲಿ ನಂಬಿಕೆ ವಿಶ್ವಾಸವೇ ಬಹುದ್ದೊಡ್ಡದು. ನಂಬಿಕೆ ಕಳೆದುಕೊಂಡರೆ ಜೀವನ ವ್ಯರ್ಥವಾಗುತ್ತದೆ. ವಿಶ್ವಾಸದಿಂದ ಅಂಗವೆಂಬ ಭೂಮಿ ಮೇಲೆ ಲಿಂಗವೆಂಬ ಬೆಳೆ ಬರುತ್ತದೆ. ಲಿಂಗವೆಂಬ ಬೆಳೆ ಬಂದಾಗ ಜೀವನ ಸುಖಿಯಾಗುತ್ತದೆ. ಲಿಂಗ ಬೆಳೆ ಬರಬೇಕಾದರೆ ಶರಣರ ಅನುಭಾವ ಶರಣರ ಸಂಗ ಮಾಡಬೇಕು ಎಂದು ತಿಳಿಸಿದರು.

ಬಸವ ಮುರುಘೇಂದ್ರ ಶ್ರೀ ಸಮ್ಮುಖ ವಹಿಸಿದ್ದರು. ಅನುದಾನಿತ ಪದವಿ ಪೂರ್ವ ಕಾಲೇಜು ನೌಕರರ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಸುಶೀಲಾಬಾಯಿ ಉಪ್ಪಿನ್ ಬಸವ ಗುರುವಿನ ಪೂಜೆ ನೆರವೇರಿಸಿದರು. ಹಿರಿಯ ಪತ್ರಕರ್ತ ಗಣಪತಿ ಬೋಚರೆ ಅಧ್ಯಕ್ಷತೆ ವಹಿಸಿದ್ದರು. ಶರಣಪ್ಪ ಬಿರಾದಾರ್ ಧರ್ಮಗ್ರಂಥ ಪಠಣ ಮಾಡಿದರು.

ಮಹೇಶ ಘಾಳೆ, ಡಾ.ನಾಗಯ್ಯ ಸ್ವಾಮಿ ಇತರರಿದ್ದರು. ವೀರಣ್ಣ ಕುಂಬಾರ ನಿರೂಪಣೆ ಮಾಡಿದರು. ಬಸವರಾಜ ಮಾಳಗೆ ವಂದಿಸಿದರು.

ಸನ್ಮಾನ: ಬೀದರ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ನೂತನ ಸದಸ್ಯರಾದ ಶಿವನಾಥ ಪಾಟೀಲ್, ವೈಷ್ಣವಿ ಆರ್.ಪಾಟೀಲ್, ಸಚೀನ ಮಲ್ಕಾಪುರ, ಅಬ್ದುಲ್ ಸತ್ತಾರ್, ಅರ್ಜುನ ಕನಕ ಮತ್ತು ಜಾನಪದ ಕಲಾವಿದ ಮಾರುತಿ ಕೋಳಿ ಅವರನ್ನು ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು.

ಹಾನಗಲ್ ಶಿವಯೋಗಿಗಳ ಶಿಷ್ಯರಾಗಿದ್ದ ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರು ಶ್ರೀಮಠದಲ್ಲಿ ೧೯೩೬ರಲ್ಲಿ ಹಾನಗಲ್ ಕುಮಾರೇಶ್ವರ ಉಚಿತ ಪ್ರಸಾದ ನಿಲಯ ತೆರೆದು ಬಡಮಕ್ಕಳಿಗೆ ಆಶ್ರಯ ಕಲ್ಪಿಸಿದ್ದಾರೆ. ಅದನ್ನು ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮುನ್ನಡೆಸಿಕೊಂಡು ಬರುತ್ತಿದ್ದಾರೆ.

| ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ