ಕಳಸ: ಜೀವನದಲ್ಲಿ ದೇಶಕ್ಕಾಗಿ ಏನನ್ನಾದರೂ ಸಾಧಿಸಿ ತೋರಿಸಬೇಕು ಎಂದು ಭಾರತ ಸರ್ಕಾರದ ಪದನಿಮಿತ್ತ ಅಪರ ಕಾರ್ಯದರ್ಶಿ ಕೃಷ್ಣ ಹೇಳಿದರು.
ಪ್ರಬೋಧಿನಿ ವಿದ್ಯಾಕೇಂದ್ರದಲ್ಲಿ ಗುರುವಾರ ಸರಸ್ವತಿ ಪೂಜಾ ಸಮಾರಂಭದ ಕೃತಂಸ್ಮರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವನದಲ್ಲಿ ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ಪ್ರತಿ ವಿದ್ಯಾರ್ಥಿಯಲ್ಲೂ ಅಗೋಚರ ಶಕ್ತಿ ಇದೆ. ಈ ಶಕ್ತಿಯನ್ನು ಜಗತ್ತಿಗೆ ತೋರಿಸುವಂಥ ಗುರಿ ಪ್ರತಿ ವಿದ್ಯಾರ್ಥಿಯಲ್ಲೂ ಇರಬೇಕು ಮತ್ತು ಆ ಗುರಿಯನ್ನು ಸಾಧಿಸಿ ಭಾರತದ ಭವ್ಯ ಪ್ರಜೆಯಾಗಬೇಕು ಎಂದು ಹೇಳಿದರು.
ವಿಪ್ರೊ ಸಂಸ್ಥೆ ಕಾರ್ಯನಿರ್ವಹಣಾಧಿಕಾರಿ ಆಶಾ ಮಾತನಾಡಿ, ಬಹಳಷ್ಟು ಶಾಲೆಗಳಲ್ಲಿ ಅಂಕ ಗಳಿಕೆಗೆ ಪ್ರಾಮುಖ್ಯತೆ ಕೊಡುತ್ತಾರೆಯೇ ಹೊರತು ವಿದ್ಯಾರ್ಥಿಯ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕೊಡುವುದಿಲ್ಲ. ಆದರೆ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಜೀವನ ಕೌಶಲ ಅಭಿವೃದ್ಧಿಪಡಿಸಿಕೊಳ್ಳಬಹುದು. ಉದ್ದೇಶ ಮತ್ತು ಗುರಿ ಸಾಧನೆ ಬಗ್ಗೆ ನಮ್ಮಲ್ಲಿ ಸ್ಪಷ್ಟತೆ ಇರಬೇಕು. ಅಂಕಪಟ್ಟಿ ದಾಖಲೆ ಅಷ್ಟೆ. ಆದರೆ ಜೀವನದಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಸಂಘಟಿತರಾಗಿ ಹೇಗೆ ಕೆಲಸ ಮಾಡುತ್ತೇವೆ? ನಮ್ಮ ಜತೆಯಲ್ಲಿ ಇರುವವರೊಂದಿಗೆ ಹೇಗೆ ಇರುತ್ತೇವೆ ಅನ್ನೋದು ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಕೃತಂಸ್ಮರ ಕಾರ್ಯಕ್ರಮದಲ್ಲಿ 10ನೇ ತರಗತಿ ಮಕ್ಕಳು ಪಾಲಕರನ್ನು ಕೈ ಹಿಡಿದು ವೇದಿಕೆಗೆ ಕರೆದುಕೊಂಡು ಬಂದು ಪಾದ ಪೂಜೆ ಮಾಡಿದರು. ಹೆತ್ತವರು ಮಕ್ಕಳಿಗೆ ಸಿಹಿ ತಿನ್ನಿಸಿ ಮಕ್ಕಳ ಹಣೆಗೆ ತಿಲಕವಿರಿಸಿದರು. ವಿದ್ಯಾರ್ಥಿಗಳು ದೀಪ ಹಿಡಿದುಕೊಂಡು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುತ್ತೇವೆ. ಕಲಿತ ಶಾಲೆ, ನಮ್ಮನ್ನು ಸಲಹಿದ ತಂದೆ ತಾಯಿಗೆ ನೋವಾಗದಂತೆ ಜೀವನವಿಡೀ ಎಚ್ಚರವಹಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶಾಲಾ ಮಕ್ಕಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.
ಪ್ರಬೋಧಿನಿ ವಿದ್ಯಾಕೇಂದ್ರದ ಅಧ್ಯಕ್ಷ ಟಿ.ವಿ.ವೆಂಕಟಸುಬ್ಬಯ್ಯ, ಕಾಫಿ ಬೆಳೆಗಾರ ಬಿ.ಎಲ್.ಸಂದೀಪ್, ಕಾರ್ಯದರ್ಶಿ ರಾಘವೇಂದ್ರ ಭಟ್, ಮುಖ್ಯಶಿಕ್ಷಕ ಆನಂದ್ ಇತರರಿದ್ದರು.