ನಾಗಮಂಗಲ: ನಾನು ಶಾಲೆಗಿಂತ ರಂಗಭೂಮಿಯಲ್ಲಿ ಹೆಚ್ಚು ಕಲಿತೆ ಎಂದರೆ ಅತಿಶಯೋಕ್ತಿಯಾಗುವುದಿಲ್ಲ. ಇದಕ್ಕಿಂತ ಮಿಗಿಲಾಗಿ ಮನುಷ್ಯನ ಜೀವನಕ್ಕೆ ಅಗತ್ಯವಾದ ಕೌಶಲಗಳನ್ನು ರಂಗಭೂಮಿ ಕಲಿಸುತ್ತದೆ ಎಂದು ಚಿತ್ರನಟಿ ಸುಧಾ ಬೆಳವಾಡಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ನಾಗರಂಗ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ರಂಗಗೌರವ ಸ್ವೀಕರಿಸಿ ಮಾತನಾಡಿದರು.
ನಾವು ಕನ್ನಡ ಸಂಘದಿಂದ ಕಲಿಯಬೇಕಾದುದು ತುಂಬಾ ಇದೆ. ನಮ್ಮ ಮನೆಯೇ ಒಂದು ಸಣ್ಣ ರಂಗಭೂಮಿಯಂತಿತ್ತು. ಆದರೆ ನಾನು ಶಾಲೆಗಿಂತ ರಂಗಭೂಮಿಯಲ್ಲಿ ಹೆಚ್ಚು ಕಲಿತೆ. ನಮ್ಮ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ನಗುತ್ತಾ ನಿಭಾಯಿಸುವುದನ್ನು ರಂಗಭೂಮಿ ಕಲಿಸುತ್ತದೆ. ನಾಗಮಂಗಲದ ಕನ್ನಡ ಸಂಘ ಇಂತಹ ಆಧುನಿಕ ಕಾಲದಲ್ಲಿಯೂ ಇಷ್ಟು ಜನರನ್ನು ಒಟ್ಟಿಗೆ ಸೇರಿಸಿ ನಾಗರಂಗ ನಾಟಕೋತ್ಸವ ಮಾಡುವ ಮೂಲಕ ಜನರನ್ನು ಬೆಸೆಯುವ ಜತೆಗೆ ಯುವಕರಿಗೆ ಪ್ರೇರಣೆ ನೀಡುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ. ನಾಗಮಂಗಲದ ನಾಗರಂಗದಿಂದ ಪ್ರೇರಣೆ ಪಡೆದು ನಾವು ಕೂಡ ನಗರ ಪ್ರದೇಶಗಳ ವಾರ್ಡ್‌ಗಳಲ್ಲಿ ನಾಟಕ ಪ್ರದರ್ಶನವನ್ನು ಮಾಡಲು ಬಯಸುತ್ತೇವೆ ಎಂದರು.
ರಂಗಗೌರವ ಸ್ವೀಕರಿಸಿ ಚಿತ್ರನಟಿ ದೀಪಾ ಭಾಸ್ಕರ್ ಮಾತನಾಡಿ, ನಾಗರಂಗ ನಾಟಕೋತ್ಸವದ ತಂಡವೊಂದರಲ್ಲಿ ನಾಟಕ ಪ್ರದರ್ಶನ ನೀಡಿದ್ದ ನನಗೆ ಇದೇ ವೇದಿಕೆಯಲ್ಲಿ ರಂಗಗೌರವ ನೀಡುತ್ತಿರುವುದು ಸಂತಸ ತಂದಿದೆ. ನಾಗಮಂಗಲ ಸುಂದರವಾದ ಊರಾಗಿದ್ದು, ದೇವಾಲಯಗಳ ಬೀಡಾಗಿದೆ. ಕನ್ನಡ ಸಂಘವು ಇಡೀ ಊರನ್ನೇ ಸೇರಿಸಿ ಇಂತಹ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತಸ ತಂದಿದೆ. ನಾಗಮಂಗಲ ಸಾಂಸ್ಕೃತಿಕವಾಗಿ ಇಷ್ಟು ಮುಂದಿರುವ ಊರಿನಲ್ಲಿ ಕನ್ನಡ ಸಂಘವು 15 ವರ್ಷಗಳಿಂದ ನಾಟಕೋತ್ಸವವನ್ನು ಆಯೋಜಿಸುತ್ತಾ ಬಂದಿರುವ ಜತೆಗೆ 51 ವರ್ಷಗಳ ಸೇವೆ ಸಲ್ಲಿಸಿರುವುದು ಅದ್ಭುತವೇ ಸರಿ ಎಂದರು.
ಕಲಾಮಂದಿರ ನಿರ್ಮಾಣ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಕನ್ನಡ ಸಂಘವು ನಿರಂತರವಾಗಿ ಕಾರ್ಯಕ್ರಮ ಮತ್ತು ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬರುತ್ತಿದೆ. ಕನ್ನಡ ಸಂಘದ ಸದಸ್ಯರು ಕಲಾಮಂದಿರದ ಬೇಡಿಕೆಯಿಟ್ಟಿದ್ದು, ನಾನು ಹಿಂದೆ ಶಾಸಕನಾಗಿದ್ದಾಗಲೇ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದೆ. ಆದರೆ ನಾನು ಸೋತ ನಂತರ ಜಾಗವನ್ನು ಗುರುತಿಸಿ ಕೆಲಸ ಪ್ರಾರಂಭಿಸದಿರುವುದಕ್ಕೆ ತಾಲೂಕಿನ ಜನರೇ ಹೊಣೆಯೇ ಹೊರತು ನಾನಲ್ಲ. ತಾಲೂಕಿನಲ್ಲಿ ಒಂದು ಸುಸಜ್ಜಿತ ಕಲಾಮಂದಿರವನ್ನು ತಮ್ಮ ಅವಧಿಯಲ್ಲಿ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು ಮಾತನಾಡಿ, ನಾಗಮಂಗಲ ಜತೆಗಿನ ಒಡನಾಟವನ್ನು ಸ್ಮರಿಸಿಕೊಂಡರು. ಕನ್ನಡ ಸಂಘದ ಅಧ್ಯಕ್ಷ ಕೆ.ಅಲಮೇಲ, ಕಾರ್ಯದರ್ಶಿ ಹರೀಶ್‌ಬಾಬು, ಖಜಾಂಚಿ ರತ್ನಮ್ಮ, ಸದಸ್ಯರಾದ ನಾ.ಸು.ನಾಗೇಶ್, ಆದಿಶೇಷ, ಮಂಜುನಾಥ್, ನಟರಾಜ್, ಮಧು, ಎನ್.ಸಿ.ಶಿವಕುಮಾರ್, ಮುರಳೀಧರ್, ಹನುಮಂತು, ಸಿ.ವಿ.ಜಯರಾಮ್, ಬಾಲಕೃಷ್ಣ, ರಾಜಶೇಖರ್ ಸೇರಿದಂತೆ ಸಂಘದ ಸದಸ್ಯರು ಇದ್ದರು.