ಬಾಗಲಕೋಟೆ ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ಸುತ್ತೂರು ಜಗದ್ಗುರು ಲಿಂ. ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ೧೦೮ನೇ ಜನ್ಮ ದಿನೋತ್ಸವ ಸಂಸ್ಥಾಪಕರ ದಿನೋತ್ಸವ ಆಚರಿಸಲಾಯಿತು 
ಜಿಲ್ಲೆ

ಜೀವನ ಸಾರ್ಥಕತೆಯತ್ತ ಬದುಕು ಸಾಗಲಿ

ಬಾಗಲಕೋಟೆ: ಮನುಷ್ಯ ಜೀವನವು ಸಾರ್ಥಕವಾಗಲು ಪ್ರೇಮ, ವಾತ್ಸಲ್ಯ, ಅನುಕಂಪ, ಜೀವ ಪ್ರೀತಿ, ಪ್ರಾಮಾಣಿಕ, ಕಾಯಕ ನಿಷ್ಠ ಗುಣಗಳು ಅವಶ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಸುಮನ ಮುಚಖಂಡಿ ಹೇಳಿದರು.

ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಲಿಂ. ವೀರಭದ್ರಪ್ಪ ಎಸ್. ಮುಚಖಂಡಿ ಸ್ಮರಣಾರ್ಥ ಬಾಗಲಕೋಟೆ ತಾಲೂಕಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ಸುತ್ತೂರು ಜಗದ್ಗುರು ಲಿಂ. ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ೧೦೮ನೇ ಜನ್ಮ ದಿನೋತ್ಸವ ಸಂಸ್ಥಾಪಕರ ದಿನೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶರಣ ಸಂಸ್ಕೃತಿ ನಮ್ಮ ಬದುಕಿನಲ್ಲಿ ನಿತ್ಯ ಅಳವಡಿಸಿಕೊಳ್ಳಬೇಕು. ನಾಡಿನ ನೆಮ್ಮದಿ, ಶ್ರೇಯೋಭಿವೃದ್ಧಿಗೆ ಮೌಲ್ಯಯುತ ಜೀವನ ವಚನಗಳು ಕಲಿಸಿಕೊಡುತ್ತವೆ ಎಂದರು.

ಗುಣದಾಳದ ಡಾ.ವಿವೇಕಾನಂದ ದೇವರು ಮಾತನಾಡಿ, ಶಿವಶರಣರ ವಚನಗಳು ಮೌಲ್ಯಯುತ ಜೀವನಕ್ಕೆ ಮಾರ್ಗದರ್ಶಿಯಾಗಿವೆ, ಅವುಗಳನ್ನು ತಿಳಿದು ಬದುಕಬೇಕು ; ಜೀವನಕ್ಕೆ ಶ್ರೇಷ್ಠತೆ ಬರುತ್ತದೆ. ಮನಸ್ಸಿನ ಉದ್ವೇಗಗಳನ್ನು ನಿಯಂತ್ರಿಸಲು ಧ್ಯಾನದ ಅವಶ್ಯಕತೆಯಿದೆ. ವಿದ್ಯಾರ್ಥಿಗಳು ಶಾಂತ ಚಿತ್ತದಿಂದ ಅಭ್ಯಾಸದಲ್ಲಿ ತೊಡಗಬೇಕೆಂದು ಹೇಳಿದರು.

ಪ್ರಾಚಾರ್ಯ ಸುಷ್ಮಾದೇವಿ ಒಡೆಯರ ಮಾತನಾಡಿ, ವಿದ್ಯಾರ್ಥಿ ದೆಶೆಯಿಂದಲೇ ಮೌಲ್ಯಯುತ ಬದುಕನ್ನು ರೂಢಿಸಿಕೊಳ್ಳುವುದು ಉತ್ತಮ ಎಂದರು.
ದತ್ತಿ ದಾನಿ ಅರವಿಂದ ಮುಚಖಂಡಿ, ಬಾಗಲಕೋಟೆ ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಬಸವರಾಜ ಮುಕ್ಕುಪ್ಪಿ, ಜಿಲ್ಲಾ ಶ.ಸಾ.ಪ. ಅಧ್ಯಕ್ಷ ಎ.ಎಸ್.ಪಾವಟೆ ಇತರರು ಇದ್ದರು. ವಿಜಯಲ ಭದ್ರಶೆಟ್ಟಿ ನಿರೂಪಿಸಿದರು. ಮಹಾರುದ್ರಪ್ಪ ಇಚ್ಚಂಗಿ ವಂದಿಸಿದರು.