ಜಿಲ್ಲೆ

ಜೀವನ ಭದ್ರತೆಗೆ ಹೆಲ್ತ್ ಇನ್ಶೂರೆನ್ಸ್ ಅಗತ್ಯ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಅನಿರೀಕ್ಷತ ಅಪಘಾತಗಳು, ಅನಾರೋಗ್ಯ ಸಮಸ್ಯೆ ಎದುರಾದಲ್ಲಿ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸಲು ಆರೋಗ್ಯ ವಿಮೆಗಳು ಅತ್ಯಂತ ಸಹಕಾರಿ ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಸಲಹೆ ನೀಡಿದರು.

ನಗರದ ಪತ್ರಿಕಾ ಭವನದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯನಿರತ ಪತ್ರಕರ್ತರಿಗೆ ವೈಯಕ್ತಿಕ ಅಪಘಾತ ವಿಮೆ ಬಾಂಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರು ಸದಾ ಸುದ್ದಿ ಸಂಗ್ರಹಿಸುವ ಭರದಲ್ಲಿ ಓಡಾಟ ನಡೆಸುತ್ತಾರೆ. ಒಂದು ವೇಳೆ ಅಪಘಾತವಾದಲ್ಲಿ ಅವರನ್ನೇ ನೆಚ್ಚಿದ ಕುಟುಂಬಗಳು ಚಿಕಿತ್ಸಾ ವೆಚ್ಚ ಭರಿಸಲು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಇದನ್ನು ಮನಗಂಡು ಜಿಲ್ಲೆಯ ಪತ್ರಕರ್ತರಿಗೆ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯ ಕಲ್ಪಿಸಿರುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸದ್ಯ ಅಪಘಾತ ವಿಮೆಗಾಗಿ ಸಂಘಕ್ಕೆ ವೈಯಕ್ತಿಕವಾಗಿ 2 ಲಕ್ಷ ರೂ. ನೀಡಿದ್ದೇನೆ. ಇದು ಪತ್ರಕರ್ತರಿಗೆ ಕನಿಷ್ಠ ಭದ್ರತೆಯಾಗಿದೆ. ಸಾಮಾನ್ಯರಾಗಲೀ, ಪ್ರಧಾನಿಯಾಗಲಿ ಸಾವು ಎಲ್ಲರಿಗೂ ನಿಶ್ಚಿತ. ಆಕಸ್ಮಿಕ ಅನಾಹುತ, ಅನಿರೀಕ್ಷಿತವಾಗಿ ಕಾಯಿಲೆಗಳು ಎದುರಾಗುತ್ತವೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಲಕ್ಷಾಂತರ ರೂ. ಖರ್ಚಾಗಲಿದೆ. ಇದಕ್ಕೆ ಹೆಲ್ತ್ ಇನ್ಶೂರೆನ್ಸ್ ನೆರವಿಗೆ ಬರಲಿದೆ ಎಂದು ಹೇಳಿದರು.

ಪತ್ರಕರ್ತರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರದ ಮಟ್ಟದಲ್ಲಿ ಜಿಲ್ಲೆಯ ಎಲ್ಲ ಪ್ರತಿನಿಧಿಗಳೊಂದಿಗೆ ಪಕ್ಷಾತೀತವಾಗಿ ಪ್ರಯತ್ನಿಸುವುದಾಗಿ ಶಾಸಕರು ಭರವಸೆ ನೀಡಿದರು.

ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಸಮಾಜದ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಪತ್ರಕರ್ತರು ತಮ್ಮ ಸಮಸ್ಯೆಗಳ ಕುರಿತು ಗಮನ ಹರಿಸುವುದಿಲ್ಲ. ಹೀಗಾಗಿ ಸಂಘಟನೆ ಮೂಲಕ ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡಿರುವುದು ಸಂತೋಷದ ಸಂಗತಿ ಎಂದರು.

ಮಾಧ್ಯಮ ಪ್ರಜಾಪ್ರಭುತ್ವ ವ್ಯವಸ್ಥೆ ಕಾಯುವ ಒಂದು ಸಮೂಹ. ಇಲ್ಲಿ ಪತ್ರಕರ್ತರು ನ್ಯಾಯ, ನಿಷ್ಟುರವಾಗಿ ಎಲ್ಲವನ್ನೂ ಪ್ರತಿಬಿಂಬಿಸುತ್ತಾರೆ. ಸಾಮಾಜಿಕ ಹಿತಕ್ಕಾಗಿ ಶ್ರಮಿಸುವ ಅವರು ಅಂಚೆ ಇಲಾಖೆಯ ಅಪಘಾತ ವಿಮೆ ಜತೆಗೆ ಸರ್ಕಾರ, ಖಾಸಗಿ ಆರೋಗ್ಯ ವಿಮೆ ಯೋಜನೆಗಳನ್ನು ಬಳಸಿಕೊಳ್ಳಲು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಭಾರತೀಯ ಅಂಚೆ ಇಲಾಖೆ ಚಿತ್ರದುರ್ಗ ವಿಭಾಗದ ಅಂಚೆ ಅಧೀಕ್ಷಕಿ ಕೆ.ಆರ್. ಉಷಾ ಮಾತನಾಡಿ, ರಾಷ್ಟ್ರದ ಹಿತಕ್ಕಾಗಿ ಶ್ರಮಿಸುವ ಸೈನಿಕರಂತೆ ದೇಶದ ಮೂಲೆ ಮೂಲೆಯಲ್ಲಿ ಸಂಚರಿಸಿ ಕಾರ್ಯನಿರ್ವಹಿಸುವ ಪತ್ರಕರ್ತರೂ ಒಂದು ರೀತಿ ಸೈನಿಕರಿದ್ದಂತೆ. ಹೀಗಾಗಿ ಜೀವನ ಭದ್ರತೆ, ಆರೋಗ್ಯ ಮತ್ತು ಕುಟುಂಬದ ಒಳಿತು ಕೂಡ ಬಹಳ ಮುಖ್ಯ. ಆ ನಿಟ್ಟಿನಲ್ಲಿ ಇಲಾಖೆಯ ಆರೋಗ್ಯ ವಿಮೆ ಅನುಕೂಲವಾಗಲಿದೆ ಎಂದು ಹೇಳಿದರು.

ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ಮಾತನಾಡಿ, ಕಾಯಿಲೆ ಹೇಳಿ-ಕೇಳಿ ಬರುವುದಿಲ್ಲ. ಪತ್ರಕರ್ತರು ಜೀವ, ಅಪಘಾತ ವಿಮೆಗೆ ಒತ್ತು ನೀಡಬೇಕು. ಬೆಂಗಳೂರಿನಂತ ಬೃಹತ್ ನಗರದ ಆಸ್ಪತ್ರೆಗಳಲ್ಲಿ ಕಡಿಮೆ ಮೊತ್ತದ ವಿಮೆ ಯಾವುದಕ್ಕೂ ಸಾಲದು. ಇಂದು ಸಾಕಷ್ಟು ಆರೋಗ್ಯ ವಿಮಾ ಯೋಜನೆಗಳು ಲಭ್ಯವಿದ್ದು, ನಿಮಗೆ ಅನುಕೂಲವಾಗುವಂತಹ ವಿಮೆ ಮಾಡಿಸಿಕೊಳ್ಳಲು ಮುಂದಾಗಬೇಕು. ಆ ನಿಟ್ಟಿನಲ್ಲಿ ಸಂಘವೂ ಪ್ರಯತ್ನಿಸಲಿ ಎಂದು ಸಲಹೆ ನೀಡಿದರು.

ಪತ್ರಕರ್ತರ ಮಕ್ಕಳು ಉತ್ತಮ ಶಿಕ್ಷಣ ಪಡೆಯುವಂತಾಗಲು, ತಮ್ಮ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಶುಲ್ಕದಲ್ಲಿ ವಿನಾಯಿತಿ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.

ಇಲಾಖೆಯ ಹಿರಿಯ ವ್ಯವಸ್ಥಾಪಕ ಪ್ರವೀಣ್ ವಿಮಾ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸಿಬ್ಬಂದಿ ಕೆ.ಎಸ್. ರಾಜು, ಪಿ.ಬಿ. ಕುಮುದಾ, ಶ್ರೇಯಂಕಾ, ವಿಶ್ವಾಸ್ ದ್ರಾವಿಡ್, ಅರುಣ್‌ಕುಮಾರ್ ವಿಮಾ ನೋಂದಣಿ ಕಾರ್ಯ ನೆರವೇರಿಸಿದರು.

ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ನಗರಸಭೆ ಅಧ್ಯಕ್ಷೆ ಅನಿತಾ ರಮೇಶ್, ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್. ಅಹೋಬಳಪತಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ. ತುಕಾರಾಂರಾವ್, ಅಹೋಬಲ ಟಿವಿಎಸ್ ಷೋರೂಂ ಮಾಲೀಕ ಪಿ.ವಿ. ಅರುಣ್‌ಕುಮಾರ್ ಇತರರಿದ್ದರು.