ಶಿರಸಿ: ಯಜ್ಞಗಳ ಮೂಲಕ ಮಾನವ ಜೀವನ ಪಾವನಗೊಳಿಸಿಕೊಳ್ಳಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಮಠದಲ್ಲಿ ಗೀತಾಭಿಯಾನದ ಅಂಗವಾಗಿ ಶ್ರೀಗಳು ಭಾನುವಾರ ಪ್ರವಚನ ನೀಡಿದರು. ಜ್ಞಾನಯೋಗದ ಅರ್ಹತೆ ಬರುವವರೆಗೂ ಕರ್ಮಯೋಗವನ್ನೇ ಅನುಷ್ಠಾನ ಮಾಡಬೇಕೆಂಬುದು ಗೀತೆಯ ಪ್ರಮುಖ ಸಂದೇಶ. ಭಗವಂತನಿಗೆ ಅರ್ಪಣೆ ಎಂಬ ಭಾವನೆಯಿಂದ ಮಾಡುವ ಕರ್ಮವೇ ಕರ್ಮಯೋಗವೆನಿಸಿಕೊಳ್ಳುತ್ತದೆ. ಬರಬೇಕಾದ ಫಲದ ಬಗ್ಗೆ ಅತಿಯಾದ ಆಲೋಚನೆಯನ್ನು ಬಿಡಬೇಕು. ತನ್ನ ಕರ್ತವ್ಯ ಕರ್ಮವನ್ನು ಸಮರ್ಪಣಾಭಾವದಿಂದ ಮಾಡಬೇಕು. ಭಗವದರ್ಪಣಾಭಾವ ಇಲ್ಲದೇ ಸ್ವಾರ್ಥಕ್ಕೋಸ್ಕರ ಅಥವಾ ಬೇರೆಯವರಿಗೋಸ್ಕರ ಮಾಡುವ ಕರ್ಮವು ನಮ್ಮನ್ನು ಸಂಸಾರ ಬಂಧನದಲ್ಲಿ ಸಿಲುಕಿಸುತ್ತದೆ ಎಂದು ನುಡಿದರು.
ಯಜ್ಞ ಕರ್ಮಗಳಿಗೂ- ಮನುಷ್ಯರಿಗೂ ಅವಿನಾಭಾವ ಸಂಬಂಧವಿದೆ. ಅಲ್ಲದೆ, ಯಜ್ಞಗಳೇ ಸಕಲ ಪ್ರಜೆಗಳಿಗೂ ಇಷ್ಟಾರ್ಥವನ್ನು ಕೊಡುವ ಕಾಮಧೇನುವಾಗಲಿ ಎಂಬುದು ಸೃಷ್ಟಿಕರ್ತನ ಅಪ್ಪಣೆಯಾಗಿದೆ. ಮನುಷ್ಯರು ಯಜ್ಞಗಳ ಮೂಲಕ ದೇವತೆಗಳನ್ನು ತೃಪ್ತಿಪಡಿಸಬೇಕು. ಅದರಿಂದ ತೃಪ್ತರಾದ ದೇವತೆಗಳು ಇಷ್ಟಾರ್ಥವನ್ನು ಅನುಗ್ರಹಿಸಿ ಮನುಷ್ಯರನ್ನು ತೃಪ್ತಿಗೊಳಿಸಬೇಕು. ಹೀಗೆ ತಮ್ಮ ಕರ್ತವ್ಯವನ್ನು ನಿರ್ವಹಿಸುವ ಮೂಲಕ ದೇವತೆಗಳು, ಮನುಷ್ಯರು ಇಬ್ಬರೂ ಶ್ರೇಯಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ದೇವತೆಗಳ ಅನುಗ್ರಹದಿಂದ ನಾವು ಪಡೆದಿರುವುದನ್ನು ಯಜ್ಞಗಳ ಮೂಲಕ ದೇವತೆಗಳಿಗೆ ಅರ್ಪಿಸಬೇಕು. ಕೇವಲ ಸ್ವಾರ್ಥಕ್ಕಾಗಿ ಮಾತ್ರ ಉಪಯೋಗಿಸಿದರೆ ಅದು ಋಣವಾಗಿ ಪರಿಣಮಿಸುತ್ತದೆ. ಅದು ಒಂದು ರೀತಿಯಿಂದ ವಂಚನೆ ಅಥವಾ ಕಳ್ಳತನವಾಗುತ್ತದೆ. ಸಹಜವಾಗಿ ನಾವು ಪ್ರತಿನಿತ್ಯ ಸೇವಿಸುವ ಆಹಾರವನ್ನು ಸಿದ್ಧಪಡಿಸುವಾಗ ತಿಳಿದೋ- ತಿಳಿಯದೆಯೋ ಅನೇಕ ಜೀವಜಂತುಗಳಿಗೆ ಹಿಂಸೆ ಉಂಟಾಗಿರುತ್ತದೆ. ಆ ದೋಷವನ್ನೂ ಪಂಚಮಹಾಯಜ್ಞಗಳ ಮೂಲಕ ಕಳೆದುಕೊಳ್ಳಬೇಕಾದದ್ದು ಅವಶ್ಯ ಕರ್ತವ್ಯವೂ ಆಗಿದೆ. ಯಜ್ಞಗಳ ಮೂಲಕ ದೇವತೆಗಳಿಗೆ ಹವಿಸ್ಸನ್ನು ಅರ್ಪಿಸಿ ಪ್ರಸಾದವೆಂಬ ಪವಿತ್ರ ಭಾವನೆಯಿಂದ ನಾವು ಸ್ವೀಕರಿಸಿದರೆ ಆ ಅನ್ನವು ಅಮೃತವಾಗುತ್ತದೆ ಎಂದು ತಿಳಿಸಿದರು.