ಜಿಲ್ಲೆ

ಜೀವನ ಪಾಠವನ್ನು ಕಲಿಸುವ ರಂಗಭೂಮಿ: ರಂಗಕರ್ಮಿ ನ.ರತ್ನ

ಮೈಸೂರು: ರಂಗಭೂಮಿ ನಟನೆಯ ಹೊರತಾಗಿ ಜೀವನ ಪಾಠವನ್ನು ಕಲಿಸುತ್ತದೆ ಎಂದು ಹಿರಿಯ ರಂಗಕರ್ಮಿ ನ.ರತ್ನ ಅಭಿಪ್ರಾಯಪಟ್ಟರು.


ನಿರಂತರ ಫೌಂಡೇಷನ್ ವತಿಯಿಂದ ನಗರದ ಮಾನಸಗಂಗೋತ್ರಿಯ ಗಾಂಧಿ ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಹಜರಂಗ ರಂಗ ತರಬೇತಿ ಶಿಬಿರದಲ್ಲಿ ಅಭಿಮುಖ ಪ್ರಾಯೋಗಿಕ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು. ರಂಗ ತರಬೇತಿ ಶಿಬಿರದ ಮೂಲಕ ನಟರಾಗುತ್ತೇವೆ ಎನ್ನುವುದು ಸುಳ್ಳು. ಈ ರೀತಿಯ ಶಿಬಿರ ಹೊಸಬರಿಗೆ ರಂಗಭೂಮಿಯ ಬಗ್ಗೆ ಆಸಕ್ತಿ ಬೆಳೆಸಲು ಸಹಕಾರಿಯಾಗುತ್ತದೆ. ರಂಗಭೂಮಿಯಿಂದ ನಾವು ಕಲಿಯಬೇಕಾಗಿರುವುದು ಸಹಾನೂಭೂತಿ, ಸಹಿಷ್ಣುತೆ ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.


ರಂಗಭೂಮಿಯಲ್ಲಿ ಕೇವಲ ನಟನೆಯನ್ನು ಕಲಿಯಲು ಸಾಧ್ಯ ಎಂದುಕೊಂಡಿದ್ದರೆ ಅದು ತಪ್ಪು ಅಭಿಪ್ರಾಯ. ನಟನೆ ಹೊರತಾಗಿ ಜೀವನ ಪಾಠವನ್ನು ಕಲಿಯುತ್ತೇವೆ. ಗಾಂಧಿ-ಅಂಬೇಡ್ಕರ್ ಎಂದು ಸಮಾಜವನ್ನು ಎರಡು ಭಾಗಗಳನ್ನಾಗಿ ಮಾಡಲಾಗಿದೆ. ಇಬ್ಬರನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳದ ಜನರು ಇಂತಹ ಅಪಾರ್ಥ ಸೃಷ್ಟಿಸುತ್ತಿದ್ದಾರೆ ಎಂದರು.


ಮೈವಿವಿ ಗಾಂಧಿ ಭವನದ ನಿರ್ದೇಶಕ ಎಂ.ಶಂಕರ್ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಇದೇ ಹೊತ್ತಿಗೆ ಗಾಂಧಿ ಅವರನ್ನು ಕೊಂದು 75 ವರ್ಷಗಳಾಗುತ್ತಿವೆ. ಎಂತಹ ವಿಪರ್ಯಾಸದ ಸಂದರ್ಭದಲ್ಲಿ ನಾವಿದ್ದೇವೆ ಎನ್ನುವುದನ್ನು ನೆನಪಿಸಿಕೊಳ್ಳಲು ಸಂಕಟವಾಗುತ್ತದೆ. ಒಂದು ಕಡೆ ಸಂಭ್ರಮ, ಒಂದು ಕಡೆ ಸಂಕಟ. ಪ್ರಸ್ತುತ ಭಾರತ ಈ ಸಂದರ್ಭವನ್ನು ಎದುರಿಸುತ್ತದೆಂದು ಅಂದುಕೊಂಡಿರಲಿಲ್ಲ. ನಾವೆಲ್ಲರೂ ಮತ್ತೊಮ್ಮೆ ಪ್ರೀತಿಸುವುದನ್ನು ಕಲಿಯಬೇಕು ಎಂದು ನುಡಿದರು.
ಹಸಿರು ಫೌಂಡೇಷನ್‌ನ ಹೊನ್ಗಳ್ಳಿ ಗಂಗಾಧರ್ ಮಾತನಾಡಿ, ಗಾಂಧಿಯ ಆಶಯಗಳು ಜೀವಂತವಾಗಿರುವುದು ರಂಗಭೂಮಿಯಲ್ಲಿ. ಗಾಂಧಿ ಪದೇ ಪದೆ ಪ್ರಯೋಗಕ್ಕೆ ಒಳಪಡುವುದು ಸಹ ಇದೇ ರಂಗಭೂಮಿಯಲ್ಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ನಿರಂತರ ಫೌಂಡೇಷನ್‌ನ ಪ್ರಸಾದ್ ಕುಂದೂರು ಮಾತನಾಡಿ, ಇಂದಿನ ದಿನಗಳಲ್ಲಿ ಯುವ ಸಮುದಾಯ ಒಂದು ಅನಿರೀಕ್ಷಿತವಾದ ವೇಗದಲ್ಲಿ ಓಡುತ್ತಿದೆ. ವರ್ತಮಾನದ ತಲ್ಲಣಗಳಿಗೆ ರಂಗಭೂಮಿಯ ಮೂಲಕ ಅಥವಾ ಸಮುದಾಯಗಳ ಜತೆ ಒಡನಾಡುವುದರ ಮೂಲಕ ಉತ್ತರ ಕಂಡುಕೊಳ್ಳಬಹುದು ಎಂದು ಹೇಳಿದರು.

ಗಾಂಧಿ ಹತ್ಯೆಯ ದೃಶ್ಯವನ್ನು ಮರು ಸೃಷ್ಟಿಸುವ ಮೂಲಕ ವಿಶೇಷವಾಗಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ನಿರಂತರದ ವಿದ್ಯಾರ್ಥಿಗಳು ರಂಗಗೀತೆ ಪ್ರಸ್ತುತಪಡಿಸಿದರು. ಫೌಂಡೇಷನ್‌ನ ಎಂ.ಎಂ.ಸುಗುಣಾ, ಶ್ರೀನಿವಾಸ ಪಾಲಹಳ್ಳಿ ಇದ್ದರು.