ಆಲೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಮ್ಮಿಕೊಂಡಿರುವ ದೇಶಭಕ್ತಿ ಗೀತಗಾಯನ ಹಾಗೂ ಜಾನಪದ ಗೀತಗಾಯನ ಸ್ಪರ್ಧೆಗಳು ಮಕ್ಕಳಲ್ಲಿ ದೇಶಾಭಿಮಾನ ಬೆಳೆಸುವುದರ ಜತೆಗೆ ಸಂಗೀತಾಭಿರುಚಿಯನ್ನು ವೃದ್ಧಿಸುತ್ತದೆ ಎಂದು ಆಲೂರು ವಿಶ್ವೇಶ್ವರಯ್ಯ ಐಟಿಐ ಕಾಲೇಜಿನ ಪ್ರಾಂಶುಪಾಲ ಎಚ್.ವಿ.ನಾಗಭೂಷಣ್ ಅಭಿಪ್ರಾಯಪಟ್ಟರು.
ಪಟ್ಟಣದ ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಲೂರು ವತಿಯಿಂದ ತಾಲೂಕು ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಮಕ್ಕಳನ್ನುದ್ದೇಶಿಸಿ ಮಾತನಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು, ಜೀವನ ಕೌಶಲಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ನಿರಂತರವಾಗಿ ನೂರಾರು ಮೌಲ್ಯಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದರು.
ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಸ್ಟೀಫನ್ ಪ್ರಕಾಶ್ ಮಾತನಾಡಿ, ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ನೀಡುವುದರ ಮೂಲಕ ಸ್ವಾಸ್ಥೃ ಸಮಾಜ ನಿರ್ಮಾಣ ಮಾಡುವಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ನಮ್ಮ ದೇಶದಲ್ಲಿ ಒಂದು ಶತಮಾನದಿಂದಲೂ ಶ್ರಮಿಸುತ್ತಿದೆ. ಪ್ರತಿ ಶಾಲೆಯ ಪ್ರತಿ ಮಗುವಿಗೂ ಈ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ ವಿಸ್ತರಣೆಯಾಗಬೇಕು ಎನ್ನುವ ನಿಟ್ಟಿನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖೇನ ಮಕ್ಕಳ ಮಾನಸಿಕ ಹಾಗೂ ಶಾರೀರಿಕ ಆರೋಗ್ಯವನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡುತ್ತಿದೆ ಎಂದರು.
ಆಲೂರು ತಾಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷೆ ಸಿ. ಎಸ್. ಪೂರ್ಣಿಮಾ ಮಾತನಾಡಿ, ನಮ್ಮ ಆಲೂರು ತಾಲೂಕಿನಲ್ಲಿ ಬೆರಳೆಣಿಕೆಯಲ್ಲಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಪ್ರತಿ ಶಾಲೆಯಲ್ಲಿಯೂ ಕಾರ್ಯಚಟವಟಿಕೆಗಳಲ್ಲಿ ತೊಡಗಿರುವುದು ಸಂತೋಷದ ಸಂಗತಿಯಾಗಿದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಯನ್ನೇ ಪ್ರಮುಖ ಉದ್ದೇಶವಾಗಿಟ್ಟುಕೊಂಡು ಜನ್ಮ ತಳೆದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯನ್ನು ಶಿಕ್ಷಣ ಸಂಸ್ಥೆಗಳು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದರು.
ಜಿಲ್ಲಾ ಮತ್ತು ಸ್ಕೌಟ್ಸ್ ಕಾರ್ಯದರ್ಶಿ ಸುರೇಶ್ ಗುರೂಜಿ, ಜಿಲ್ಲಾ ಸಹಾಯಕ ಆಯುಕ್ತೆ ಪ್ರೇಮಾ ಪ್ರಕಾಶ್, ತಾಲೂಕು ಸಹ ಕಾರ್ಯದರ್ಶಿ ಎಚ್.ಡಿ. ಕುಮಾರ್, ತಾಲೂಕು ಜಂಟಿ ಕಾರ್ಯದರ್ಶಿ ಕೆ.ಎಲ್. ವೆಂಕಟರಂಗಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಬೊಮ್ಮೇಗೌಡ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಂಜರ್ ಲೀಡರ್ ಅನುಷಾ ಇತರರಿದ್ದರು.