ಜಿಲ್ಲೆ

ಜೀವನ ಎಂಬ ಅಗ್ನಿಪರೀಕ್ಷೆ ಪಾಸಾಗಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವ ಮೂಲಕ ಪರೀಕ್ಷೆ ಪಾಸಾಗುವುದು ಮುಖ್ಯವಲ್ಲ. ಜೀವನ ಎಂಬ ಅಗ್ನಿಪರೀಕ್ಷೆಯಲ್ಲಿ ಪಾಸಾಗುವುದು ಮುಖ್ಯ ಎಂದು ವೈದ್ಯ ಡಾ. ರಾಜನ್ ದೇಶಪಾಂಡೆ ಹೇಳಿದರು.
ನಗರದ ರಾಯಾಪುರದ ಕೆಎಲ್‌ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಹೆಚ್ಚು ಅಂಕ ಗಳಿಸಬೇಕು ಎಂಬ ಮನೋಭಾವ ಪಾಲಕರು ಬಿಡಬೇಕು. ಹೆಚ್ಚಿನ ಅಂಕ ಜೀವನದ ಯಶಸ್ಸಿಗೆ ಕಾರಣ ಎಂಬ ಭ್ರಮೆಯಿಂದ ವಿದ್ಯಾರ್ಥಿಗಳು ಹೊರಬರಬೇಕು ಎಂದರು.
ಕೇಶವ ತೆಲಗು ಮಾತನಾಡಿ, ಶ್ರದ್ಧೆ, ಪ್ರಾಮಾಣಿಕತೆ, ಸತತ ಪ್ರಯತ್ನ ಉತ್ತಮ ವಿದ್ಯಾರ್ಥಿಯ ಲಕ್ಷಣಗಳು. ಸಾಧನೆಯ ಮೂಲಕ ಕಲಿತ ಶಾಲೆ, ಕಲಿಸಿದ ಗುರುಗಳು ಮತ್ತು ಪಾಲಕರಿಗೆ ಕೀರ್ತಿ ತರಬೇಕು ಎಂದರು.
ಮುಖ್ಯಾಧ್ಯಾಪಕಿ ಡಾ. ಶುಭಾಂಗಿ ಮೋರೆ ಶಾಲಾ ವಾರ್ಷಿಕ ವರದಿ ವಾಚಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಕರಣ ದೊಡ್ಡವಾಡ, ಶಿಕ್ಷಕಿ ರಮ್ಯಾ ಬಿಜಾಪುರ, ಅಮತಾ ಜಿ., ನಿಖಿಲ್, ಇತರರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.