ಹುಬ್ಬಳ್ಳಿ : ಜೀವಜಲದ ಮಿತ ಬಳಕೆಗೆ ಎಲ್ಲರೂ ಆದ್ಯತೆ ನೀಡಬೇಕು. ಜಲಮಾಲಿನ್ಯ ತಡೆಗಟ್ಟುವುದರ ಜತೆಗೆ ಜಲಮೂಲ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಸಂಕೇಶ್ವರ ಮಿನರಲ್ಸ್ ಓಂಕಾರ್ ವಾಟರ್ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಸಂಕೇಶ್ವರ ಅಭಿಪ್ರಾಯಪಟ್ಟರು.
ಸಂಕೇಶ್ವರ ಮಿನರಲ್ಸ್ ಪ್ರೖೆವೇಟ್ ಲಿಮಿಟೆಡ್ ಓಂಕಾರ್ ವಾಟರ್ ಹಾಗೂ ರೋಟರಿ ಹುಬ್ಬಳ್ಳಿ ಪರಿವಾರ 3170 ಸಹಯೋಗದಲ್ಲಿ ವಿಶ್ವ ಜಲ ದಿನದ ಅಂಗವಾಗಿ ಸೋಮವಾರ ನಗರದಲ್ಲಿ ಆಯೋಜಿಸಿದ್ದ ಸೈಕಲ್ ರ‍್ಯಾಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಕುರಿತು ನಮ್ಮ ಕಂಪನಿಯಿಂದ ಗಂಭೀರ ಚಿಂತನೆ ನಡೆಸಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಪ್ಲಾಸ್ಟಿಕ್ಗೆ ಪರ್ಯಾಯ ಪ್ಯಾಕೇಜ್ ವ್ಯವಸ್ಥೆ ಮಾಡಲು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಮಾತನಾಡಿ, 1992ರಿಂದ ವಿಶ್ವಸಂಸ್ಥೆ ವಿಶ್ವ ಜಲದಿನ ಆಚರಿಸುತ್ತಿದೆ. ಪ್ರತಿ ವರ್ಷ 400 ಕೋಟಿ ಜನರಿಗೆ ನೀರಿನ ಕೊರತೆ ಉಂಟಾಗುತ್ತಿದೆ. ಹಾಗಾಗಿ, ನಾವೆಲ್ಲ ಜಲ ಮೂಲಗಳನ್ನು ಸಂರಕ್ಷಿಸಬೇಕು. ಪ್ರತಿಯೊಬ್ಬರಿಗೂ ಶುದ್ಧ, ಅಗತ್ಯ ನೀರು ಸಿಗುವ ನಿಟ್ಟಿನಲ್ಲಿ ಜಾಗೃತರಾಗಬೇಕು. ಮಳೆ ನೀರು ಕೊಯ್ಲು ದಾಖಲೆಗೆ ಸೀಮಿತವಾಗದೇ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ರೋಟರಿ ಪರಿವಾರದ ವಾಟರ್ ಆಂಡ್ ಸ್ಯಾನಿಟೈಸೇಶನ್ ವಿಭಾಗದ ಚೇರ್ಮನ್ ವಿಜಯ ಹತ್ತಿಹೊಳಿ ಮಾತನಾಡಿ, ನೀರು ಮತ್ತು ನೈರ್ಮಲ್ಯೀಕರಣದ ಕುರಿತು ರೋಟರಿ ಪರಿವಾರದಿಂದ ಹಲವು ಯೋಜನೆಗಳನ್ನು ಈಗಾಗಲೇ ರೂಪಿಸಲಾಗಿದೆ. ಒಂದು ಹಳ್ಳಿಯನ್ನು ದತ್ತು ಸ್ವೀಕರಿಸಿ ನೀರಿನ ನೈರ್ಮಲ್ಯೀಕರಣ ಮತ್ತು ಸದ್ಬಳಕೆ ಕುರಿತು ಜಾಗೃತಿ ಮೂಡಿಸಿ, ಮಾದರಿ ಹಳ್ಳಿಯಾಗಿ ರೂಪಿಸುವ ಯೋಜನೆ ಶೀಘ್ರವೇ ಜಾರಿಗೊಳಿಸಲಾಗುವುದು ಎಂದರು.
ಸೈಕಲ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ನೂರಾರು ಸದಸ್ಯರು ಜಲ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಪರಿಸರ ಅಧಿಕಾರಿ ಶೋಭಾ ಪೋಳ, ಎಫ್ಐಸಿಸಿಯ ಡಾ. ದೀಪಕಕುಮಾರ ಸುಖೆ, ಬಿಐಎಸ್ ಮುಖ್ಯಸ್ಥ ಸೆಲ್ವಂ, ಸಂಕೇಶ್ವರ ಮಿನರಲ್ಸ್ ಉಪಾಧ್ಯಕ್ಷ ವಿಲಾಸ ಸೋಗೇಕರ, ಮತ್ತಿತರರು ಪಾಲ್ಗೊಂಡಿದ್ದರು.
ಕರಪತ್ರದೊಂದಿಗೆ ಜಲಜಾಗೃತಿ: ಚನ್ನಮ್ಮ ವೃತ್ತದಿಂದ ಆರಂಭಗೊಂಡ ಸೈಕಲ್ ರ‍್ಯಾಲಿ ವಿದ್ಯಾನಗರ, ನವನಗರ, ಗೋಪನಕೊಪ್ಪ, ಕೇಶ್ವಾಪುರ, ದುರ್ಗದ ಬೈಲ್, ಸಿದ್ಧಾರೂಢ ಮಠ, ಗೋಕುಲ ರಸ್ತೆ ಮಾರ್ಗವಾಗಿ ತೆರಳಿ ಪುನಃ ಚನ್ನಮ್ಮ ವೃತ್ತಕ್ಕೆ ಮರಳಿ ಅಂತ್ಯಗೊಂಡಿತು. ನೂರಾರು ಮಹಿಳೆಯರು ಮತ್ತು ಮಕ್ಕಳು ರ್ಯಾಲಿಯಲ್ಲಿ ಪಾಲ್ಗೊಂಡು ‘ಜೀವಜಲ ಉಳಿಸಿ’ ಎಂಬ ಸಂದೇಶ ಸಾರಿದರು. ಸೈಕಲ್ ರ‍್ಯಾಲಿ ವೇಳೆ ನೀರಿನ ಮಹತ್ವದ ಕುರಿತು ಕರಪತ್ರ ಹಂಚುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ನಗರದ ಹಲವು ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಜಲಜಾಗೃತಿ ಮೂಡಿಸಲಾಯಿತು.