ಚಿಕ್ಕಬಳ್ಳಾಪುರ: ತಾಲೂಕಿನ ಚಿಕ್ಕನಹಳ್ಳಿಯಲ್ಲಿ ನಿರಂತರ 72 ಗಂಟೆಗಳ ಕಾಲ ಜೀವಂತ ಯೋಗ ಸಮಾಧಿಯಲ್ಲಿರಲು ಮುಂದಾಗಿದ್ದ ಸನ್ಯಾಸಿಯೊಬ್ಬರು ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಭಯಭೀತರಾಗಿ ಪರಾರಿಯಾಗಿದ್ದಾರೆ.
ತಾರನೇಯಿ ಸಾಯಿ (58) ಪರಾರಿಯಾದ ಸನ್ಯಾಸಿ. ಚಿಕ್ಕನಹಳ್ಳಿಯ ಜಮೀನೊಂದರಲ್ಲಿ ಗುಂಡಿ ಅಗೆದು, ಸಮಾಧಿ ಸಿದ್ಧಪಡಿಸಲಾಗಿತ್ತು. ಈ ದೃಶ್ಯಕ್ಕೆ ಸಾಕ್ಷಿಯಾಗಲು ಸುತ್ತಲಿನ ಗ್ರಾಮಗಳ ಜನರೂ ನೆರೆದಿದ್ದರು. ಇನ್ನೇನು ಪೂಜಾ ಕಾರ್ಯಕ್ರಮಗಳನ್ನು ಪ್ರಾರಂಭಿಸಬೇಕೆನ್ನುವಷ್ಟರಲ್ಲಿ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಯೋಗ ಸಮಾಧಿಗೆ ಅನುಮತಿ ಪಡೆದಿರುವ ಪತ್ರ ನೀಡಲು ತಿಳಿಸುತ್ತಿದ್ದಂತೆ ಸನ್ಯಾಸಿಯಾದಿಯಾಗಿ ಒಬ್ಬೊಬ್ಬರೇ ಕಾಲ್ಕಿತ್ತಿದ್ದಾರೆ.
ಘಟನೆ ಹಿನ್ನೆಲೆ: ತಿಂಗಳ ಹಿಂದೆ ಚಿಕ್ಕನಹಳ್ಳಿಗೆ ಬಂದ ತಾರನೇಯಿ ಸಾಯಿ (58) ಉತ್ತರ ಭಾರತದ ಮೂಲದ ಸನ್ಯಾಸಿ ಎಂದು ಹೇಳಿ ಗ್ರಾಮಸ್ಥರಲ್ಲಿ ಪರಿಚಯಿಸಿಕೊಂಡಿದ್ದರು. ಆಗಾಗ ಊರಿನಲ್ಲಿ ಸುತ್ತಾಡುವ ಜತೆಗೆ ಖಾಲಿ ಪ್ರದೇಶದಲ್ಲಿ ಧ್ಯಾನದಲ್ಲಿ ಮಗ್ನರಾಗಿರುತ್ತಿದ್ದರು. ಜನರು ಮಾರುಹೋಗಿ ಭಕ್ತರಾಗಿದ್ದು, ಸ್ಥಳೀಯ ನಿವಾಸಿ ರಿಯಲ್ ಎಸ್ಟೇಟ್ ವ್ಯಾಪಾರಿ ವೆಂಕಟೇಶ್ ಎಂಬುವವರು ತನ್ನ ಜಮೀನಿನಲ್ಲಿ ಚಪ್ಪರವನ್ನೂ ಹಾಕಿಕೊಟ್ಟಿದ್ದಾರೆ. ಹೀಗಿರುವಾಗ ಈ ಜಾಗದಲ್ಲಿ ಶಿವಲೋಕಂ ಸೃಷ್ಟಿಸಲಾಗುವುದು ಮತ್ತು ಆಯುರ್ವೇದ, ಯೋಗ, ಧ್ಯಾನ ಶಿಬಿರಗಳನ್ನು ನಡೆಸಲಾಗುವುದು ಎಂದ ಸನ್ಯಾಸಿ, ಇದಕ್ಕಾಗಿ ಮೊದಲು ನಿರಂತರವಾಗಿ 72 ಗಂಟೆಗಳ ಕಾಲ ಜೀವಂತ ಯೋಗ ಸಮಾಧಿಯಲ್ಲಿದ್ದು ಮತ್ತೆ ವಾಪಸ್ ಬರುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸುವ ಭಯದಿಂದ ಪೂಜಾ ಕಾರ್ಯಗಳನ್ನು ಸ್ಥಗಿತಗೊಳಿಸಿ, ಸಂಬಂಧಪಟ್ಟವರು ಪರಾರಿಯಾಗಿದ್ದಾರೆ.
ಆಧ್ಯಾತ್ಮಿಕ ತಾಣಕ್ಕೆ ಕಸರತ್ತು : ರಿಯಲ್ ಎಸ್ಟೇಟ್ ವ್ಯಾಪಾರಿ ವೆಂಕಟೇಶ್ ಎಂಬುವವರ ಪುತ್ರನನ್ನು ಈ ಹಿಂದೆ ದುಷ್ಕರ್ಮಿಗಳು ಗ್ರಾಮದ ಹೊರವಲಯದಲ್ಲಿ ಕೊಲೆ ಮಾಡಿದ್ದರು. ಇದೇ ನೋವಿನಲ್ಲಿರುವಾಗಲೇ ಸನ್ಯಾಸಿಯ ಆಗಮನ ಕುಟುಂಬದವರಲ್ಲಿ ಮಿಂಚಿನ ಸಂಚಾರ ತಂದಿತ್ತು. ಮಗನನ್ನು ಸಮಾಧಿ ಮಾಡಿದ ಜಮೀನಿನಲ್ಲಿಯೇ ಆಶ್ರಮ ಪ್ರಾರಂಭಿಸಿ, ದೊಡ್ಡ ಆಧ್ಯಾತ್ಮಿಕ ತಾಣವನ್ನಾಗಿಸುವ ಯೋಜನೆ ರೂಪಿಸಲಾಗಿತ್ತು. ಆದರೆ, ಇದು ವಿಲವಾಗಿದೆ.
ಜಮೀನಿನಲ್ಲಿ ಸಮಾಧಿ ಸಿದ್ಧತೆ : ಸನ್ಯಾಸಿಯು ಯೋಗ ಸಮಾಧಿಯಲ್ಲಿರಲು ಅನುಕೂಲವಾಗುವಂತೆ 9 ಅಡಿ ಅಗಲ 6 ಅಡಿ ಉದ್ದ 9 ಅಡಿ ಆಳದ ಗುಂಡಿ ಅಗೆಯಲಾಗಿದೆ. ಒಳಗೆ ಮತ್ತೊಂದು ಕಿರು ಸಮಾಧಿ ಇದ್ದು ಸೋಮವಾರ ಬೆಳಗ್ಗೆ 11.40ಕ್ಕೆ ಸಮಾಧಿಯೊಳಗೆ ಹೋಗಲು ಮುಹೂರ್ತ ನಿಗದಿಪಡಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕರಪತ್ರಗಳನ್ನು ಮುದ್ರಿಸಿ, ಸ್ಥಳೀಯವಾಗಿ ಹಂಚಲಾಗಿತ್ತು.