???????????????????????????????????? 
ಜಿಲ್ಲೆ

ಜೀವಂತ ಕಲೆಯಾದ ನಾಟಕದಿಂದ ವ್ಯಕ್ತಿತ್ವ ವಿಕಸನ

ಚಿತ್ರದುರ್ಗ: ನಾಟಕ ಜೀವಂತ ಕಲೆಯಾಗಿದ್ದು, ಅದರ ಮೂಲಕ ಮನುಷ್ಯನ ಭಾವನೆಗಳನ್ನು ಉತ್ತಮಗೊಳಿಸಿ, ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಿದೆ ಎಂದು ಹಿರಿಯ ನಟ ಶ್ರೀನಾಥ್ ತಿಳಿಸಿದರು.

ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಶ್ರೀ ರಾಘವೇಂದ್ರ ಸ್ವಾಮೀಜಿ, ಶ್ರೀ ಸೂರುದಾಸ್ ಜೀ ಅವರ ಪುಣ್ಯಾರಾಧನೆ ಅಂಗವಾಗಿ ಹಮ್ಮಿಕೊಂಡಿರುವ ತಿರುಕನೂರಿನಲ್ಲಿ ರಂಗದಾಸೋಹ ನಾಟಕೋತ್ಸವಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿ ದೆಸೆಯಿಂದಲೇ ನಾಟಕಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು. ಆಗ ದೇಶ ಮತ್ತು ಸಮಾಜದಲ್ಲಿ ಸತ್ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯ. ಇಲ್ಲಿನ ಆಶ್ರಮದ ಆಡಳಿತ ಮಂಡಳಿ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ರೂಪಿಸುವಲ್ಲಿ ಸಫಲವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಮೃತ್ ಆರ್ಗ್ಯಾನಿಕ್ಸ್‌ನ ಮಾಲೀಕ ಕೆ.ನಾಗರಾಜ್ ಮಾತನಾಡಿ, ಹಿರಿಯ ವಿದ್ಯಾರ್ಥಿಗಳಾದ ನಾವೆಲ್ಲರೂ ಕೈಜೋಡಿಸಿದಾಗ ಅನಾಥ ಸೇವಾಶ್ರಮದ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ಹೆಚ್ಚಿಸಲು ಸಾಧ್ಯವಿದೆ. ಸಮಾಜದ ಋಣ ತೀರಿಸುವ ಉದ್ದೇಶವಿದ್ದರೆ, ಇಂತಹ ಸೇವಾನಿರತ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದಾವಣಗೆರೆ ವಿನ್ನರ್ ಅಕಾಡೆಮಿಯ ಸ್ಥಾಪಕ ಡಾ.ಶಿವರಾಜ್ ಕಬ್ಬೂರ್ ಮಾತನಾಡಿ, ಗ್ರಾಮೀಣ ಪ್ರದೇಶವಾದ ಮಲ್ಲಾಡಿ ಹಳ್ಳಿಯನ್ನು ಜಗದ್ವಿಖ್ಯಾತಗೊಳಿಸಿದ ಪೂಜ್ಯರ ಕಾರ್ಯಗಳನ್ನು ನಾವೆಲ್ಲರೂ ಮುಂದುವರಿಸಬೇಕಿದೆ. ಆ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದರು.

ಅನಾಥ ಸೇವಾಶ್ರಮದ ಕಾರ್ಯದರ್ಶಿ ಎಸ್.ಕೆ.ಬಸವರಾಜನ್ ಮಾತನಾಡಿ, ಯೋಗ ಮತ್ತು ಆಯುರ್ವೇದ ಸಮಾಜದಲ್ಲಿ ಅತ್ಯಂತ ಮಹತ್ತರವಾದ ಪಾತ್ರ ಹೊಂದಿವೆ. ರಾಘವೇಂದ್ರ ಶ್ರೀಗಳು 8 ದಶಕಗಳ ಹಿಂದೆಯೇ ಇದರ ಮಹತ್ವದ ಕುರಿತು ಪ್ರಚಾರ ಮಾಡಿದ್ದರು. ಇದರಿಂದಲೇ ಸಮಾಜದಲ್ಲಿ ಲಕ್ಷಾಂತರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ವೈದೇಹಿ ರಚಿತ, ಮಂಜುಳಾ ಬಾದಾಮಿ ನಿರ್ದೇಶನದ, ಎಚ್.ಎಸ್.ನಾಗರಾಜ ಸಂಗೀತದ ನಾಯಿಮರಿ ನಾಟಕವನ್ನು ರಾಘವೇಂದ್ರ ಗುರುಕುಲ ವಿದ್ಯಾಪೀಠ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಹಾಸನ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಬಿ.ಆರ್.ಹಾಲೇಶ್, ಹಿರಿಯ ವಿದ್ಯಾರ್ಥಿ ಪರಶುರಾಮ ಗಡ್ಡಿ, ಸೇವಾಶ್ರಮದ ಉಪಾಧ್ಯಕ್ಷ ರಾಘವೇಂದ್ರ ಪಾಟೀಲ್, ಖಜಾಂಚಿ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ವಿಶ್ವಸ್ತರಾದ ಕೆ.ಡಿ.ಬಡಿಗೇರ, ಎಂ.ಜಿ.ರಾಮದಾಸ್, ಪಿ.ಕೆ.ರಾಜಪ್ಪ, ಸುಧಾಕರ್, ಎಚ್.ಸಿ.ರವಿ, ಶಿಕ್ಷಕರಾದ ಎಚ್.ಎಂ.ಸೋಮಶೇಖರ್, ಜಿ.ಚಂದ್ರಪ್ಪ, ಜಿ.ಟಿ.ಶಂಕರಮೂರ್ತಿ ಇತರರಿದ್ದರು.