ಜಿಲ್ಲೆ

ಜೀವ ಹೋದರೂ ಕೈಗಾರಿಕೆಗೆ ನೀರು ಬಿಡುವುದಿಲ್ಲ

ಹುಕ್ಕೇರಿ: ರೈತರು ಸಂಘಟಿತರಾಗಿ ಹೋರಾಟ ಮಾಡದಿದ್ದರೆ ನಮ್ಮ ಹಿಡಕಲ್ ಜಲಾಶಯದ ನೀರು ಹುಬ್ಬಳ್ಳಿ-ಧಾರವಾಡ ಕೈಗಾರಿಕೆ ಉದ್ದೇಶದ ನೆಪದಲ್ಲಿ ಸಚಿವರ ಕಾರ್ಖಾನೆಗಳಿಗೆ ತೆಗೆದುಕೊಂಡು ಹೋಗುತ್ತಾರೆ ಎಂದು ಕರ್ನಾಟಕ ರೈತ ಸಂಘದ ಅಧ್ಯಕ್ಷ ಮಹಾಂತೇಶ ಕಮತ ಹೇಳಿದರು.

ಪಟ್ಟಣದ ಕೋರ್ಟ್ ಸರ್ಕಲ್ ಬಳಿ ಕರ್ನಾಟಕ ರೈತ ಸಂಘ ಹಾಗೂ ಕಾರ್ಮಿಕರ ಹಿತಾಸಕ್ತಿ ಸಂಘದ ತಾಲೂಕು ಸಂಘಟನೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ನಮ್ಮ ಜಲಾಶಯ, ನಮ್ಮ ನೀರು, ನಮ್ಮ ಹಕ್ಕು ಪ್ರತಿಭಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ೧೮ ಕ್ಷೇತ್ರದ ಜನಪ್ರತಿನಿಧಿಗಳಿಗೆ ಇದು ಗೊತ್ತಿದ್ದರೂ ಸುಮ್ಮನಿದ್ದಾರೆಂದರೆ ಅವರ ಕೈವಾಡ ಇರುವ ಸಂಶಯವಿದೆ. ಎರಡು ನದಿಗಳಿದ್ದರೂ ಬೇಸಿಗೆಯಲ್ಲಿ ನೀರಿನ ಕೊರತೆಯಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಬೇರೆ ಜಿಲ್ಲೆಗೆ ನೀರು ತೆಗೆದುಕೊಂಡು ಹೋಗಬಾರದು. ಮುಂಬರುವ ಚುನಾವಣೆಯಲ್ಲಿ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸೋಣ. ನಮ್ಮ ಜೀವ ಹೋದರೂ ಧಾರವಾಡ ಕೈಗಾರಿಕೆ ಉದ್ದೇಶಕ್ಕಾಗಿ ನೀರು ಒಯ್ಯುಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಉಪಾಧ್ಯಕ್ಷ ಜಿಯಾವುಲ್ಲಾ ವಂಟಮೂರಿ ಮಾತನಾಡಿ, ಹಿರಣ್ಯಕೇಶಿ ನದಿಯಿಂದ ಎಲಿಮುನ್ನೋಳಿ ಗ್ರಾಮದ ಬಸವೇಶ್ವರ ಕೆರೆ ತುಂಬಬೇಕು. ಹುಕ್ಕೇರಿಯಲ್ಲಿ ರೈತಭವನ ನಿರ್ಮಿಸಬೇಕು. ಬೆಳೆಗಳ ದಾಸ್ತಾನಿಗಾಗಿ ಗೋದಾಮು ನಿರ್ಮಾಣವಾಗಬೇಕೆಂದರು.

ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ನರೇಗಾದಡಿ ಕೂಲಿಕಾರ್ಮಿಕರು ರೈತರ ಜಮೀನುಗಳಲ್ಲಿ ದುಡಿಯವಂತೆ ಕಾನೂನು ತಂದು ಅಧಿಕ ಇಳುವರಿ ತೆಗೆಯಲು ಪ್ರೋತ್ಸಾಹಿಸಬೇಕು ಎಂದರು.

ರೈತ ಮುಖಂಡರಾದ ಗೋಪಾಲ ಮರಬಸನ್ನವರ, ಅಶೋಕ ನರಸನ್ನವರ, ಸಲೀಂ ಮುಲ್ಲಾ, ಗುರುಸಿದ್ದ ಮಡಿವಾಳ, ರವಿ ಕಾಂಬಳೆ, ಶಶಿಶೇಖರ ಧಾಮನಿಮಠ, ಶಾಂತಿನಾಥ ಮಗದುಮ್ಮ, ಬಸವರಾಜ ಹುಲಕುಂದ, ಮಲ್ಲಕಾರ್ಜುನ ವಾಲಿ, ಭೀಮಗೌಡ ಇಮಗೌಡನವರ, ಮಹೇಶ ದೊಡ್ಡಲಿಂಗನ್ನವರ ಇತರರಿದ್ದರು.